ತಮ್ಮೂರಿಗೆ ತೆರಳಲು ಅರಮನೆ ಮೈದಾನದಲ್ಲಿ ಸೇರಿದ ಸಾವಿರಾರು ವಲಸೆ ಕಾರ್ಮಿಕರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 23- ಕಳೆದ ವಾರದಿಂದ ನಿರಂತರವಾಗಿ ರಾಜ್ಯ ಬಿಟ್ಟು ಹೋಗುತ್ತಿರುವ ವಲಸೆ ಕಾರ್ಮಿಕರು ಇಂದು ನಗರದ ಅರಮನೆ ಮೈದಾನಕ್ಕೆ ಸಹಸ್ರ ಸಂಖ್ಯೆಯಲ್ಲಿ ಒಮ್ಮೆಲೆ ಆಗಮಿಸಿದ್ದರಿಂದ ಗೊಂದಲದ ಪರಿಸ್ಥಿತಿ ಉಂಟಾಗಯಿತು.

ಒಮ್ಮೆಲೆ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಮತ್ತು ಈಶಾನ್ಯ ರಾಜ್ಯಗಳ ನಿವಾಸಿಗಗಳು ಆಗಮಿಸಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಪೆÇಲೀಸರು ಪರದಾಡಬೇಕಾಯಿತು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರನ್ನು ಸಮಾಧಾನಪಡಿಸುವ ಕೆಲಸ ಮಾಡಿದರು.

ಉದ್ಯೋಗ ಅರಸಿ ಬೆಂಗಳೂರಿಗೆ ಬಂದವರು ವಾಪಸ್ ಹೋಗಲು ಸರ್ಕಾರ ಅವಕಾಶ ಕಲ್ಪಿಸಿದೆ. ತವರಿಗೆ ಮರಳುವವರು ಸೇವಾ ಸಿಂಧು ಆ್ಯಪ್‍ನಲ್ಲಿ ನೋಂದಾಯಿಸಿಕೊಳ್ಳಬೇಕು, ನೋಂದಾಯಿಸಿಕೊಂಡರಿಗೆ ಎಸ್‍ಎಂಎಸ್ ರವಾನೆಯಾಗಿತ್ತು. ಈ ಎಸ್‍ಎಂಎಸ್ ಸಂದೇಶ ಫಾರ್‍ವರ್ಡ್ ಆಗಿ ನೋಂದಾವಣೆ ಆಗದೆ ಇದ್ದ ಸಾವಿರಾರು ಮಂದಿ ಅರಮನೆ ಮೈದಾನಕ್ಕೆ ಆಗಮಿಸಿದರು.

ನೋಂದಾಯಿಸಿದವರಿಗೆ ಮಾತ್ರ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ ಎಂದರೂ ಕೇಳದ ಹೊರ ರಾಜ್ಯದವರು ತಮಗೂ ತವರಿಗೆ ವಾಪಸ್ ಹೋಗಲು ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು. ನಿರೀಕ್ಷೆಗೆ ಮೀರಿ ಜನ ಆಗಮಿಸಿದ್ದರಿಂದ ಸಾಮಾಜಿಕ ಅಂತರ ಮಾಯವಾಗಿತ್ತು. ಕುಡಿಯುವ ನೀರು, ಲಘು ಉಪಹಾರದ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.

ನೋಂದಾಯಿತ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಮಾಡಿ ಅವರ ಊರಿಗೆ ಹೋಗಲು ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ, ನೋಂದಾವಣೆಯಾಗದೆ ಇದ್ದವರು ಬಂದಿದ್ದರಿಂದ ಎಲ್ಲವೂ ಅಸ್ತವ್ಯಸ್ತವಾಯಿತು. ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಲು, ದಾಖಲಾತಿಗಳನ್ನು ಪರಿಶೀಲನೆ ಮಾಡಲು ಸಿಬ್ಬಂದಿ ಕೊರತೆಯಾಗಿ ಹಿರಿಯ ಅಕಾರಿಗಳು ಹೈರಾಣಾದರು.

ಈಶಾನ್ಯ ರಾಜ್ಯಗಳವರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಗೊಂದಲ ಉಂಟಾಗಿದ್ದನ್ನು ಗಮನಿಸಿ ಚಿಕ್ಕಬಳ್ಳಾಪುರಕ್ಕೆ ಪ್ರವಾಸ ಕೈಗೊಂಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಖುದ್ದು ಧಾವಿಸಿ ಬಂದರು.

ತಪ್ಪು ಮಾಹಿತಿಯಿಂದಾಗಿ ಮಣಿಪುರ, ಒಡಿಶಾ ರಾಜ್ಯಗಳ ಸಾವಿರಾರು ಮಂದಿ ಜಮಾಯಿಸಿದ್ದರಿಂದ ಈ ಗೊಂದಲ ಉಂಟಾಗಿದೆ. ಒಂದೂವರೆ ಸಾವಿರ ಮಂದಿಗೆ ಆಯಾ ರಾಜ್ಯಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಿಕೊಂಡು ಸೇವಾಸಿಂಧು ಆ್ಯಪ್ ಮೂಲಕ ಮೊಬೈಲ್‍ಗಳಿಗೆ ಸಂದೇಶ ರವಾನಿಸಲಾಗಿದೆ.

ಆ ಸಂದೇಶ ಅವರಲ್ಲೇ ಫಾರ್ವರ್ಡ್ ಆಗಿ ಇಂದು ಪ್ರಯಾಣ ಕ್ಕೆ ಆಯ್ಕೆ ಆಗದಿದ್ದವರೂ ನೂರಾರು ಸಂಖ್ಯೆ ಯಲ್ಲಿ ಆಗಮಿಸಿ ಭಾರಿ ದಟ್ಟಣೆ ಉಂಟಾಗಿದೆ ಎಂದು ಸಚಿವರು ವಿಷಾದ ವ್ಯಕ್ತ ಪಡಿಸಿದರು. ತಕ್ಷಣವೇ ಮೊಬೈಲ್ ಮೂಲಕ ಮುಖ್ಯ ಕಾರ್ಯದರ್ಶಿ ಸಹಿತ ಹಿರಿಯ ಅಕಾರಿಗಳ ಜತೆ ಮಾತನಾಡಿ ಗೊಂದಲ ಬಗೆಹರಿಸಲು ಕ್ರಮಕೈಗೊಳ್ಳುವಂತೆ ಆದೇಶ ನೀಡಿದರು.

ಚಿಕಿತ್ಸೆ ನೀಡಿದ ಸಚಿವರು: ಈ ಸಂದರ್ಭದಲ್ಲಿ ಮೂರ್ಛೆ ರೋಗದಿಂದ ಬಳಲುತ್ತಿದ್ದ ಎರ್ಷಾದ್ ಎಂಬಾತ ಕುಸಿದು ಬಿದ್ದಾಗ ಆತನ ಬಳಿ ಧಾವಿಸಿದ, ವೈದ್ಯರು ಆಗಿರುವ ಸಚಿವ ಸುಧಾಕರ್ ಅವರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ನಂತರ ಈಶಾನ್ಯ ರಾಜ್ಯಗಳ ಜನರನ್ನುದ್ದೇಶಿಸಿ ಮಾತನಾಡಿ, ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರಿಗೂ ಸರ್ಕಾರದ ವೆಚ್ಚದಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ಸಿಎಂ ಅವರು ಅದಕ್ಕೆ ಬೇಕಾದ ಎಲ್ಲಾ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ನೀವು ನಿಮ್ಮ ಊರಿಗೆ ಹೋಗಲು ಹೆಚ್ಚುವರಿ ಬೋಗಿಗಳನ್ನು ಒದಗಿಸಲು ರೈಲ್ವೆ ಸಚಿವರಿಗೂ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿರುವ ಪ್ರತಿಯೊಬ್ಬ ನಾಗರಿಕರಿಗೆ ಅಗತ್ಯ ನೆರವು, ಸಹಕಾರ ನೀಡಲು ರಾಜ್ಯಸರ್ಕಾರ ಬದ್ಧವಾಗಿದೆ, ಯಾರೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸಚಿವರು ಭರವಸೆ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಅರಮನೆ ಮೈದಾನದಲ್ಲಿ ಸೂಕ್ತವಾದ ನಾಗರೀಕ ಸೌಲಭ್ಯಗಳಿಲ್ಲದೆ ಇರುವುದನ್ನು ಕಂಡು ಕಿಡಿಕಾರಿದರು.

ಸೋಂಕು ಹರಡದಂತೆ ಮುಂಜಾಗ್ರತೆ ಕೈಗೊಂಡಿಲ್ಲ. ಸರ್ಕಾರ ತನ್ನ ಪಕ್ಷದ ಮತ ಬ್ಯಾಂಕ್ ಕಾಯ್ದುಕೊಳ್ಳುವ ಬದಲಿಗೆ ವಲಸೆ ಕಾರ್ಮಿಕರಿಗೆ ಆಹಾರ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಿದ್ದರೆ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಲಕ್ಷಾಂತರ ಕಾರ್ಮಿಕರು ಈ ರೀತಿ ಭಾರಿ ಸಂಖ್ಯೆಯಲ್ಲಿ ವಲಸೆ ಹೋಗುತ್ತಿರಲಿಲ್ಲ ಎಂದು ವಿಷಾದಿಸಿದರು.

Facebook Comments

Sri Raghav

Admin