5 ದಿನದಲ್ಲಿ 3400ಕ್ಕೂ ಹೆಚ್ಚು ಬಸ್‍ಗಳ ಮೂಲಕ ಊರುಗಳಿಗೆ ತೆರಳಿದ ಲಕ್ಷಕ್ಕೂ ಹೆಚ್ಚು ಕಾರ್ಮಿಕರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 7- ಕಳೆದ ಐದು ದಿನಗಳಿಂದ 3400ಕ್ಕೂ ಹೆಚ್ಚು ಬಸ್‍ಗಳ ಮೂಲಕ ಬೆಂಗಳೂರು ಹಾಗೂ ರಾಜ್ಯದ ವಿವಿಧ ವಿಭಾಗಗಳಿಂದ ಸುಮಾರು ಒಂದು ಲಕ್ಷ ಕಾರ್ಮಿಕರನ್ನು ಸ್ಥಳಾಂತರಿಸಲಾಗಿದ್ದು ಇಂದು ಕಾರ್ಯಾಚರಣೆ ಅಂತ್ಯಗೊಳ್ಳಲಿದೆ.

ಬೆಳಗ್ಗೆ 8 ಗಂಟೆಯಿಂದಲೇ ಕಾರ್ಮಿಕರನ್ನು ವಿವಿಧ ಜಿಲ್ಲೆಗಳಿಗೆ ಕರೆದೊಯ್ಯುವ ಕಾರ್ಯಾಚರಣೆ ಪ್ರಾರಂಭವಾಗಿತ್ತು. ಇಂದು ಸಂಜೆ 7 ಗಂಟೆಗೆ ಕಾರ್ಯಾಚರಣೆ ಅಂತ್ಯಗೊಳ್ಳಲಿದೆ.

ಕಾರ್ಮಿಕರಿಗಾಗಿ ರಾಜ್ಯದ ವಿವಿಧ ಒಟ್ಟು 72 ಸ್ಥಳಗಳಿಗೆ ಬಸ್ಸುಗಳ ಕಾರ್ಯಚರಣೆ ಮಾಡಲಾಗುತ್ತಿದೆ. ಬೆಳಗ್ಗೆ 8ರಿಂದ ಇಲ್ಲಿಯವರೆಗೂ ಬೆಂಗಳೂರಿನಿಂದ 106 ಬಸ್ಸುಗಳನ್ನು ಕಾರ್ಯಚರಣೆ ಮಾಡಲಾಗಿದೆ.

ಕಳೆದ ಐದು ದಿನಗಳಿಂದ ನಿರಂತರವಾಗಿ ನಡೆದ ಕಾರ್ಯಾಚರಣೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನು ವಿವಿಧ ಊರುಗಳಿಗೆ ಉಚಿತವಾಗಿ ತಲುಪಿಸಲಾಗಿದೆ. ಲಾಕ್‍ಡೌನ್ ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಬಸ್‍ನಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಅಲ್ಲದೆ ಊರುಗಳಿಗೆ ತಲುಪಿದಾಗ ಅವರ ಆರೋಗ್ಯ ತಪಾಸಣೆ ನಡೆಸಿ ಕೆಲವು ದಿನಗಳ ಕಾಲ ಕ್ವಾರಂಟೈನ್‍ನಲ್ಲಿಡಲು ಸೂಚಿಸಲಾಗಿದೆ. ಕೊರೊನಾ ಸೋಂಕು ವ್ಯಾಪಿಸದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ಇಂದು ಸಹ ಬೆಳಗ್ಗೆ 9ರಿಂದ ಬಸ್ಸುಗಳ ಕಾರ್ಯಚರಣೆ ಪ್ರಾರಂಭವಾಗಬೇಕಿತ್ತು. ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಬೆಳಗ್ಗೆ 8 ಗಂಟೆಗೇ ಬಸ್ಸುಗಳ ಸಂಚಾರ ಪ್ರಾರಂಭಿಸಲಾಯಿತು.

ಕೆ ಎಸ್‍ಆರ್ ಟಿಸಿ ಸೇರಿ ಇತರೆ ಸಾರಿಗೆ ನಿಗಮಗಳ ಚಾಲಕ/ ನಿರ್ವಾಹಕರು ಹಾಗೂ ಸಿಬ್ಬಂದಿಗಳು ಈ ನಿಟ್ಟಿನಲ್ಲಿ ಅವಿರತ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin