ತಪ್ಪಿತು ಭಾರಿ ವಿಧ್ವಂಸಕ ಕೃತ್ಯ, 3 ಜೈಷ್ ಉಗ್ರರ ಸೆರೆ, ಭಾರಿ ಶಸ್ತ್ರಾಸ್ತ್ರ ವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು , ಸೆ.12- ಗಡಿ ಪ್ರದೇಶದ ಮೂಲಕ ಕಾಶ್ಮೀರದೊಳಕ್ಕೆ ನುಸುಳಿ ವಿಧ್ವಂಸಕ ಕೃತ್ಯ ನಡೆಸಲು ಸಜ್ಜಾಗಿದ್ದ ಪಾಕಿಸ್ತಾನದ ಜೈಷ್-ಎ- ಮಹಮ್ಮದ್ ಸಂಘಟನೆಯ ಮೂವರು ಉಗ್ರಗಾಮಿಗಳನ್ನು ಜಮ್ಮುವಿನ ಕತುವಾ ಪ್ರದೇಶದಲ್ಲಿ ಬಂಧಿಸಲಾಗಿದೆ. ಪೊಲೀಸರು ನಡೆಸಿದ ಈ ಕಾರ್ಯಾಚರಣೆಯಲ್ಲಿ ಟ್ರಕ್ ಮತ್ತು ಆರು ಎಕೆ-47 ರೈಫಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಇದರೊಂದಿಗೆ ಜಮ್ಮುವಿನಲ್ಲಿ ನಡೆಯಬಹುದಾಗಿದ್ದ ಮತ್ತೊಂದು ವಿಧ್ವಂಸಕ ಕೃತ್ಯ ತಪ್ಪಿದಂತಾಗಿದೆ. ಜಮ್ಮು-ಪಠಾಣ್‍ಕೋಟ್ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ರಕ್‍ನನ್ನು ಪೊಲೀಸರು ತಡೆದು ತಪಾಸಣೆ ನಡೆಸಿದಾಗ ಅವರ ಬಳಿ ಆರು ಎಕೆ-47 ರೈಫಲ್‍ಗಳು ಇದ್ದದ್ದು ಪತ್ತೆಯಾಯಿತು.

ವಾಹನ ಸಮೇತ ಮೂವರು ಜೈಷ್ ಉಗ್ರರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಮ್ಮು ವಲಯದ ಪೊಲೀಸ್ ಮಹಾ ನಿರೀಕ್ಷಕ (ಐಜಿಪಿ) ಮುಖೇಶ್ ಸಿಂಗ್ ತಿಳಿಸಿದ್ದಾರೆ. ಇವರು ಪಂಜಾಬ್‍ನ ಬಮಿಯತ್ ಪ್ರದೇಶದಿಂದ ಕಾಶ್ಮೀರದೊಳಗೆ ನುಸುಳಿ ವಿಧ್ವಂಸಕ ಕೃತ್ಯ ನಡೆಸಲು ಸಜ್ಜಾಗಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಬಂಧಿತರೆಲ್ಲರೂ ಜೈಷ್ ಉಗ್ರಗಾಮಿ ಸಂಘಟನೆಯ ಭಯೋತ್ಪಾದಕರಾಗಿದ್ದು,

ಇಂಡೋ-ಪಾಕ್ ಗಡಿ ಮೂಲಕ ಮೊದಲು ಪಂಜಾಬ್‍ನ್ನು ಪ್ರವೇಶಿಸಿದ್ದು, ಅಲ್ಲಿಂದ ಕಾಶ್ಮೀರ ಕಣಿವೆಯಲ್ಲಿ ದಾಳಿಗಳನ್ನು ನಡೆಸಲು ಶಸ್ತ್ರ ಸಜ್ಜಿತರಾಗಿ ಧಾವಿಸುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಮತ್ತಷ್ಟು ಉಗ್ರರು ಪಂಜಾಬ್ ಮತ್ತು ಕಾಶ್ಮೀರಕ್ಕೆ ನುಸಿಳಿರುವ ಶಂಕೆಯಿದ್ದು, ತೀವ್ರ ಶೋಧ ಮುಂದುವರೆಸಲಾಗಿದೆ.

Facebook Comments