ಶರಣಾಗುವಂತೆ ಅಸ್ಸಾಂ ಬಂಡುಕೋರರಿಗೆ ಮೋದಿ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ತಮ್ಲಾಪುರ್(ಅಸ್ಸೋಂ),ಏ .3-ಅಸ್ಸೋಂನ ಬಂಡುಕೋರರು ಮುಖ್ಯವಾಹಿನಿಗೆ ಬರಲು ಶರಣಾಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅಸ್ಸೋಂನ ವಿಧಾನಸಭೆ ಚುನಾವಣೆ ಪ್ರಯುಕ್ತ ಬಕ್ಷಾ ಜಿಲ್ಲೆಯಲ್ಲಿ ಬಹಿರಂಗ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಂತಿ, ಒಗ್ಗಟ್ಟು ಹಾಗೂ ಸ್ಥಿರತೆಗಾಗಿ ಹಿಂಸೆಯನ್ನು ತ್ಯಜಿಸುವಂತೆ ಕರೆ ನೀಡಿದ್ದಾರೆ.

ಎನ್‍ಡಿಎ ಸರ್ಕಾರ ಸಮಾಜದ ಎಲ್ಲಾ ವರ್ಗಗಳ ತಾರತಮ್ಯವನ್ನು ಹೋಗಲಾಡಿಸಲು ಹಲವಾರು ಕಾನೂನು ಹಾಗೂ ನೀತಿಗಳನ್ನು ಪರಿಷ್ಕರಣೆ ಮಾಡುತ್ತಿದೆ. ಕೆಲವರು ವೋಟ್ ಬ್ಯಾಂಕ್‍ನ ರಾಜಕಾರಣಕ್ಕಾಗಿ ಜಾತ್ಯಾತೀತತೆಯ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ನಾವು ನಿಜವಾದ ಜಾತ್ಯಾತೀತತೆಯನ್ನು ಪಾಲನೆ ಮಾಡುತ್ತಿದ್ದೇವೆ. ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಕಲ್ಪಿಸುವ ಕೆಲಸ ಮಾಡುತ್ತಿದ್ದೇವೆ. ಆದರೂ ನಮ್ಮನ್ನು ಕೋಮುವಾದಿಗಳು ಎಂದು ದೂಷಿಸಲಾಗುತ್ತಿದೆ. ಎನ್‍ಡಿಎ ಸರ್ಕಾರ ಸಬ್ ಕಾ ಸಾಥ್, ಸಬ್ ಕ ವಿಕಾಸ್, ಸಬ್ ಕಾ ವಿಶ್ವಾಸ್ ನಿಯಮವನ್ನು ಪಾಲನೆ ಮಾಡುತ್ತಿದೆ ಎಂದಿದ್ದಾರೆ.

ಜಾತ್ಯಾತೀತತೆ ಮತ್ತು ಕೋಮುವಾದಗಳು ದೇಶವನ್ನು ಸಾಕಷ್ಟು ಘಾಸಿ ಮಾಡಿವೆ. ಅದರ ಹೊರತಾಗಿ ಎನ್‍ಡಿಎ ಸರ್ಕಾರ ಪ್ರತಿಯೊಬ್ಬರನ್ನು ಸಬಲೀಕರಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಅಸ್ಸೋಂ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಆಡಳಿತದಲ್ಲಿದ್ದು, ಡಬ್ಬಲ್ ಎಂಜಿನ್ ಸರ್ಕಾರದಿಂದ ಅಸ್ಸೋಂನ ಜನತೆ ದುಪ್ಪಟ್ಟು ಲಾಭ ಪಡೆದಿದ್ದಾರೆ ಎಂದು ಮೋದಿ ಹೇಳಿದ್ದಾರೆ.

Facebook Comments