ಲಡಾಕ್ ಲಡಾಯಿ : ಭಾರತ-ಚೀನಾ ನಡುವೆ 8ನೇ ಸೇನಾ ಕಮಾಂಡರ್ ಗಳ ಮಾತುಕತೆ ಪ್ರಗತಿಯಲ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

ಚುಶೂಲ್(ಲಡಾಕ್),ನ.6- ಲಡಾಕ್‍ನ ಇಂಡೋ-ಚೀನಾ ಗಡಿಭಾಗದಲ್ಲಿ ಕೆಲವು ತಿಂಗಳಿನಿಂದ ಉದ್ಭವಿಸಿರುವ ಗಡಿ ಸಂಘರ್ಷ ಬಿಕ್ಕಟ್ಟು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ನಡುವೆ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆಗಳು ಪ್ರಗತಿಯಲ್ಲಿವೆ.  ಲಡಾಕ್‍ನ ಚುಶೂಲ್ ಪ್ರದೇಶದಲ್ಲಿ ಇಂದು ಭಾರತ ಮತ್ತು ಚೀನಾ ಸೇನಾ ಉನ್ನತ ಕಮಾಂಡರ್‍ಗಳ 8ನೇ ಸುತ್ತಿನ ಮಾತುಕತೆ ಆರಂಭವಾಗಿದ್ದು, ಗಡಿ ಬಿಕ್ಕಟ್ಟು ಇತ್ಯರ್ಥಕ್ಕಾಗಿ ಗಂಭೀರ ಚರ್ಚೆ ಮುಂದುವರೆದಿದೆ.

ಇಂಡೋ ಚೀನಾ ನಡುವೆ ಈವರೆಗೆ ನಡೆದ 7 ಸುತ್ತಿನ ಮಾತುಕತೆಗಳಲ್ಲಿ ನಿರೀಕ್ಷಿತ ಫಲಶೃತಿ ಲಭ್ಯವಾಗದೆ ಬಿಕ್ಕಟ್ಟು ಯಥಾಸ್ಥಿತಿಯಲ್ಲೇ ಮುಂದುವರೆದಿದೆ. ಕಳೆದ ಅ.12ರಲ್ಲಿ ಉಭಯ ದೇಶಗಳ ನಡುವೆ ಸುದೀರ್ಘ ಮಾತುಕತೆ ನಡೆದಿತ್ತಾದರೂ ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ಎರಡೂ ದೇಶಗಳು ನಿರ್ಧಾರಕ್ಕೆ ಬಂದಿವೆ.

ಪೂರ್ವ ಲಡಾಕ್‍ನ ಸೂಕ್ಷ್ಮಪ್ರದೇಶಗಳಿಂದ ಉಭಯ ದೇಶಗಳ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಷಯದಲ್ಲಿ ಭಿನ್ನಾಭಿಪ್ರಾಯ ಮುಂದುವರೆದಿದೆ. ಹೀಗಾಗಿ ಗಡಿ ಬಿಕ್ಕಟ್ಟು ಯಥಾಸ್ಥಿತಿಯಲ್ಲೇ ಮುಂದುವರೆದಿದ್ದು, ಭಾರತ-ಚೀನಾ ಸೇನಾ ಪಡೆಗಳು ಭಾರೀ ಸಂಖ್ಯೆಯಲ್ಲಿ ಗಡಿಯಲ್ಲಿ ವಾಸ್ತವ್ಯ ಹೂಡಿದ್ದು, ಯುದ್ಧದ ಕಾರ್ಮೋಡಗಳು ಚದುರದೆ ದಟ್ಟವಾಗಿಯೇ ಉಳಿದಿದೆ.

ಪೂರ್ವ ಲಡಾಕ್‍ನ ವಾಸ್ತವ ಗಡಿರೇಖೆ(ಎಲ್‍ಒಸಿ) ಬದಲಾವಣೆಗೆ ಮತ್ತು ಗಡಿಭಾಗದಿಂದ ಭಾರತ ಸೇನೆ ಮೊದಲು ಹಿಂದಕ್ಕೆ ಸರಿಯಬೇಕೆಂಬ ಚೀನಾದ ಒತ್ತಡವನ್ನು ಭಾರತ ಸಾರಾ ಸಗಾಟಾಗಿ ತಳ್ಳಿಹಾಕಿದೆ.  ಇವರೆಗೆ ನಡೆದ ರಾಜತಾಂತ್ರಿಕ ಮತ್ತು ಸೇನಾ ಕಮಾಂಡರ್‍ಗಳ ಮಾತುಕತೆ ನಿರೀಕ್ಷಿತ ಫಲಿತಾಂಶ ದೊರೆಯದೆ ಸಂಘರ್ಷ ವಾತಾವರಣ ಯಥಾಸ್ಥಿತಿಯಲ್ಲೇ ಮುಂದುವರೆದಿದೆ.

ಗಡಿಭಾಗದಲ್ಲಿ ಭಾರತ ಮತ್ತು ಚೀನಾದ ತಲಾ 50 ಸಾವಿರಕ್ಕೂ ಹೆಚ್ಚು ಯೋಧರು ಅಪಾರ ಯುದ್ದಾಸ್ತ್ರಗಳೊಂದಿಗೆ ಸನ್ನದ್ದರಾಗಿದ್ದು, ಯುದ್ದೋನ್ಮಾನ ವಾತಾವರಣ ಇನ್ನು ತಿಳಿಗೊಂಡಿದೆ.

ಚಳಿಗಾಲ ಋತುವಿನಲ್ಲಿ ತಾಪಮಾನ ಮೈನಸ್ ಮಟ್ಟಕ್ಕಿಂತ ಕುಸಿದಿದ್ದು, ಭಾರತೀಯ ಯೋಧರು ಈ ಪ್ರತಿಕೂಲ ವಾತಾವರಣದಲ್ಲೂ ಗಡಿ ರಕ್ಷಣೆಗೆ ನಿಂತಿದ್ದು, ಪಿಎಲ್‍ಎ ಯೋಧರ ಯಾವುದೇ ದುಸ್ಸಾಹಸವನ್ನು ಹಿಮ್ಮೆಟ್ಟಿಸಲು ಸರ್ವಸನ್ನದ್ದರಾಗಿದ್ದಾರೆ.

Facebook Comments