ಥಾಣೆಯಲ್ಲೊಂದು ಮಿನಿ `ಐಎಂಎ’ ವಂಚನೆ ಪ್ರಕರಣ : ನೂರಾರು ಜನರಿಗೆ ಪಂಗನಾಮ..!

ಈ ಸುದ್ದಿಯನ್ನು ಶೇರ್ ಮಾಡಿ

ಥಾಣೆ, ಜೂ. 29- ಬೆಂಗಳೂರಿನಲ್ಲಿ ಸಹಸ್ರಾರು ಜನರಿಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ದೇಶಾದ್ಯಂತ ಸುದ್ದಿಯಾಗಿರುವ ಮಹಮ್ಮದ್ ಮನ್ಸೂರ್ ಖಾನ್ ಒಡೆತನದ ಐಎಂಎ ಮಹಾಮೋಸದ ಮಾದರಿಯಲ್ಲಿಯೇ ಇನ್ನೊಂದು ಪ್ರಕರಣ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ಅತ್ಯಧಿಕ ಬಡ್ಡಿದರದ ಆಮಿಷವೊಡ್ಡಿ ನೂರಾರು ಜನರಿಂದ ಕೋಟ್ಯಂತರ ರೂ.ಗಳ ಠೇವಣಿ ಸಂಗ್ರಹಿಸಿ ಪಂಗನಾಮ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಭರಣ ಮಳಿಗೆಯ ಮಾಲೀಕ ಸಂತೋಷ್ ಶೆಲರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ತಮ್ಮಿಂದ ಲಕ್ಷಾಂತರ ರೂ.ಗಳನ್ನು ಸಂಗ್ರಹಿಸಿ ಹಣವನ್ನು ಹಿಂದುರಿಗಿಸಿಲ್ಲ ಎಂದು ಆರೋಪಿಸಿ 20ಕ್ಕೂ ಹೆಚ್ಚು ಮಂದಿ ಥಾಣೆಯ ನೌಪಾದ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಆರೋಪಿ ಸಂತೋಷನನ್ನು ಬಂಧಿಸಲಾಗಿದೆ ಎಂದು ಇನ್ಸ್‍ಪೆಕ್ಟರ್ ಅವಿನಾಶ್ ಸೊನ್‍ಕರ್ ತಿಳಿಸಿದ್ದಾರೆ.

ಉತ್ತಮ ರೀತಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ತನ್ನ ಆಭರಣ ಮಳಿಗೆ ಹೆಸರಿನಲ್ಲಿ ಈತ ಚಿನ್ನಾಭರಣಗಳು ಮತ್ತು ಹಣಕಾಸು ಠೇವಣಿಗೆ ಅಧಿಕ ಬಡ್ಡಿದರ ನೀಡುವ ಆಮೀಷವೊಡ್ಡಿ ನೂರಾರು ಜನರಿಂದ ಕೋಟ್ಯಂತರ ರೂ.ಗಳನ್ನು ಸಂಗ್ರಹಿಸಿ ಸಂತೋಷ್ ವಂಚಿಸಿದ ಬಗ್ಗೆ ವ್ಯಾಪಕ ದೂರುಗಳು ದಾಖಲಾಗಿವೆ.

ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ. ಈ ಪ್ರಕರಣ ಸಂಬಂಧ ಮತ್ತಷ್ಟು ಮಂದಿ ದೂರು ನೀಡುವ ಸಾಧ್ಯತೆಯಿದ್ದು, ಕೂಲಂಕಷ ತನಿಖೆ ನಂತರ ಆರೋಪಿ ವಂಚಿಸಿದ ನಿಖರ ಮೊತ್ತದ ಬಗ್ಗೆ ಮಾಹಿತಿ ಲಭಿಸಲಿದೆ ಎಂದು ಠಾಣಾಧಿಕಾರಿ ಹೇಳಿದ್ದಾರೆ.

ಸಂತೋಷ್ ತನ್ನ ವಂಚನೆ ಜಾಲಕ್ಕೆ ಏಜೆಂಟ್‍ಗಳು ಮತ್ತು ಸಬ್ ಏಜೆಂಟ್‍ಗಳನ್ನು ಬಳಸಿಕೊಂಡಿದ್ದು, ಅವರ ಮೂಲಕ ವಹಿವಾಟು ನಡೆಸುತ್ತಿದ್ದ. ಇದಕ್ಕೆ ಸಂಬಂಧಪಟ್ಟ ಏಜೆಂಟ್‍ಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಪರಾರಿಯಾಗಿರುವ ಇತರರ ಏಜೆಂಟ್‍ಗಳಾಗಿ ಶೋಧ ಕಾರ್ಯ ಮುಂದುವರೆದಿದೆ.

Facebook Comments

Sri Raghav

Admin