ಮಾಲಿನ್ಯ ನಿಯಂತ್ರಣಕ್ಕೆ ಹೊಸ ನಿಯಮ ಜಾರಿ : ಸಚಿವ ಆನಂದ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.16-ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ಯೋಜನೆ ಜಾರಿಗೆ ತರುವ ಆಲೋಚನೆ ಇದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಆನಂದ್ ಸಿಂಗ್ ತಿಳಿಸಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಕೈಗಾರಿಕೆಗಳಿಗಾಗಿ ನೋಂದಣಿ ಅಭಿಯಾನವಾದ ಸಮ್ಮತಿ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಾಧ್ಯವಾದಷ್ಟು ಶೀಘ್ರವೇ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದರು.

ಕೆಲವರು ಮಾಲಿನ್ಯ ನಿಯಂತ್ರಣದ ನಿಯಮಗಳನ್ನು ಉಲ್ಲಂಘಿಸುವ ಅಭ್ಯಾಸವನ್ನು ಮಾಡಿಕೊಳ್ಳುತ್ತಾರೆ. ಅಂಥವರಿಗಾಗಿ ಕಠಿಣವಾದ ಕ್ರಮ ಕೈಗೊಳ್ಳುವ ಆದೇಶವನ್ನು ಮಾಡಲಾಗುವುದು. ಅಂದ ಮಾತ್ರಕ್ಕೆ ಈ ಕಠಿಣ ಕ್ರಮ ಕೈಗೊಳ್ಳುವುದು ದುರುಪಯೋಗವೂ ಆಗಬಾರದು. ಯಾರು ಉಲ್ಲಂಘನೆ ಮಾಡುತ್ತಾರೆ ಅವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಸಣ್ಣ ಕೈಗಾರಿಕೆಗಳಿಗೆ ಅನುಕೂಲವಾಗುವುದಾದರೆ ಅದಾಲತ್‍ನ್ನು ಜಾರಿಗೆ ತರಲಾಗುವುದು ಎಂದರು.

ಸುಮಾರು 30 ಲಕ್ಷ ಮಂದಿಗೆ ಉದ್ಯೋಗ ನೀಡಿರುವ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ನಮ್ಮ ಇಲಾಖೆ ಹಾಗೂ ಸರ್ಕಾರದಿಂದ ಹೆಚ್ಚಿನ ಸಹಕಾರ ಕೈಗಾರಿಕೆಗೆ ದೊರೆಯಲು ಅನುಕೂಲವಾಗುವಂತೆ ಸರ್ಕಾರದ ಗಮನವನ್ನು ಸೆಳೆಯಲಾಗುವುದು.

ಕಾರ್ಖಾನೆಗಳಲ್ಲಿ ಪರಿಸರ ರಕ್ಷಣೆಯ ಬಗ್ಗೆ ಅರಿವು ಮೂಡಿಸಿ ಕಾರ್ಯರೂಪಕ್ಕೆ ತರಬೇಕು. ಪ್ರತಿಯೊಬ್ಬರು ಆತ್ಮಸಾಕ್ಷಿಗೆ ಅನುಗುಣವಾಗಿ ಪರಿಸರ ರಕ್ಷಣೆ ಮಾಡಬೇಕು. ಪರಿಸರ ಕಾಪಾಡುವುದು ಕೇವಲ ಪರಿಸರ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾತ್ರವಲ್ಲ ಎಲ್ಲರ ಜವಾಬ್ದಾರಿಯೂ ಇದೆ ಎಂದರು.

ಸಣ್ಣ ಕೈಗಾರಿಕೆ ಬೆಳವಣಿಗೆಗೆ ವಿಶ್ವಾಸ ಮೂಡುವ ರೀತಿಯಲ್ಲಿ ಸಹಕಾರ ನೀಡಬೇಕಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಣ್ಣ ಕೈಗಾರಿಕೆಗಳಿಗೆ ಕಿರುಕುಳ ಕೊಡುವ ಆರೋಪವಿದೆ. ವ್ಯವಸ್ಥೆ ಸರಿಯಾಗಿ ನಡೆಯಲು ಅನುಕೂಲವಾಗುವಂತೆ ಆಡಳಿತದಲ್ಲಿ ಸಾಕಷ್ಟು ಬದಲಾವಣೆ ತರಬೇಕು.

ಸಣ್ಣ ಕೈಗಾರಿಕೆಗಳ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಾಧ್ಯವಾದಷ್ಟು ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು. ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ಸಾಧ್ಯವಾದಷ್ಟು ಸುಧಾರಣೆ ತರುವ ಪ್ರಯತ್ನವನ್ನು ಇಲಾಖೆಯಲ್ಲಿ ಮಾಡಲಾಗುವುದು ಎಂದು ಹೇಳಿದರು.

ಪರಿಸರ ರಕ್ಷಣೆ ಮಾಡದಿದ್ದರೆ ನಮಗೆ ಉಳಿಗಾಲವಿಲ್ಲ. ಪ್ರಕೃತಿ ವಿರುದ್ಧ ಮನುಷ್ಯ ಹೋಗುತ್ತಿದ್ದಾನೆ. ಆದರೆ ಪ್ರಕೃತಿ ಅದರದೇ ಆದ ರೀತಿಯಲ್ಲಿ ಉತ್ತರ ಕೊಡುತ್ತಿದೆ. ಹೀಗಾಗಿ ಪರಿಸರ ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಿ ಕಾರ್ಯರೂಪಕ್ಕೆ ತರಬೇಕು ಎಂದರು.  ಮೃಗಾಲಯದಲ್ಲಿರುವ ಪ್ರಾಣಿಗಳ ನೆರವಿಗೆ ದೇಣಿಗೆ ನೀಡಲು ಮುಂದಾಗಬೇಕು ಎಂದು ಇದೇ ಸಂದರ್ಭದಲ್ಲಿ ಆನಂದ್‍ಸಿಂಗ್ ಕರೆ ನೀಡಿದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಆಡಳಿತ ಮಂಡಳಿ ಸದಸ್ಯ ಶ್ರೀಕಂಠದತ್ತ ಮಾತನಾಡಿ, ಸಮ್ಮತಿ ಪತ್ರ ಪಡೆಯಲು ಅರ್ಜಿ ನಮೂನೆಯನ್ನು ಸರಳೀಕರಣಗೊಳಿಸಲಾಗಿದೆ. ಸಮಾಜಕ್ಕೆ ಅನುಕೂಲವಾಗುವ ರೀತಿಯಲ್ಲಿ ತ್ಯಾಜ್ಯ ಉತ್ಪಾದನೆ, ನಿರ್ವಹಣೆ ಮಾಡಬೇಕು. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 8 ಸಾವಿರ ಕೈಗಾರಿಕೆಗಳಿದ್ದು, ಅಲ್ಲೂ ಕೂಡ ಸಮ್ಮತಿ ಮೇಳವನ್ನು ಆಯೋಜಿಸಬೇಕು. ಪ್ರತಿ ಜಿಲ್ಲೆಯಲ್ಲೂ ಇಂಥ ಮೇಳವನ್ನು ನಡೆಸಬೇಕೆಂದು ಸಲಹೆ ಮಾಡಿದರು.

ಕೈಗಾರಿಕಾ ವಸಾಹತುಗಳಲ್ಲಿ ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಅಪಾಯಕಾರಿ ತ್ಯಾಜ್ಯ ಸಂಗ್ರಹಣೆಗೆ ಸರಿಯಾದ ದರ ನಿಗದಿಪಡಿಸಬೇಕು. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಬಾರದು ಎಂಬುದು ಸೇರಿದಂತೆ ಹಲವು ಸಮಸ್ಯೆಗಳ ಮನವಿ ಪತ್ರವನ್ನು ಕಾಸಿಯಾದ ಅಧ್ಯಕ್ಷ ಕೆ.ಬಿ.ಅರಸಪ್ಪ ಸಚಿವರಿಗೆ ನೀಡಿದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು, ಕಾಸಿಯಾದ ನಿಕಟಪೂರ್ವ ಅಧ್ಯಕ್ಷ ಆರ್.ರಾಜು, ಜೀವಿ ಮತ್ತು ಪರಿಸರ ವಿಭಾಗದ ಅಧ್ಯಕ್ಷ ಎಚ್.ಕೆ.ಮಲ್ಲೇಶ್‍ಗೌಡ ಮತ್ತಿತರರು ಪಾಲ್ಗೊಂಡಿದ್ದರು.

Facebook Comments