ನನ್ನ ರಾಜಕೀಯ ಭವಿಷ್ಯವನ್ನು ಆ ‘ಕೃಷ್ಣ ಪರಮಾತ್ಮ’ ನಿರ್ಧರಿಸುತ್ತಾನೆ : ಸಚಿವ ಆನಂದ್‍ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಹೊಸಪೇಟೆ, ಆ.11- ನನ್ನ ರಾಜಕೀಯ ಆರಂಭವೋ, ಅಂತ್ಯವೋ ಎಲ್ಲವನ್ನೂ ಕೃಷ್ಣ ಪರಮಾತ್ಮ ನಿರ್ಧರಿಸುತ್ತಾನೆ ಎಂದು ಹೊಸಪೇಟೆ ಸಚಿವ ಆನಂದ್‍ಸಿಂಗ್ ಮಾರ್ಮಿಕವಾಗಿ ಹೇಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದರು.  ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅಲ್ಲದೆ, ಶಾಸಕ ಸ್ಥಾನಕ್ಕೂ ಕೂಡ ರಾಜೀನಾಮೆ ನೀಡಲಿದ್ದಾರೆ ಎಂಬ ದಟ್ಟ ವದಂತಿ ಹಬ್ಬಿತ್ತು.

ಹೊಸಪೇಟೆಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿಂದು ತಮ್ಮ ಕುಟುಂಬದವರೊಂದಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008ರಿಂದ ಇಲ್ಲಿಂದಲೇ ನನ್ನ ರಾಜಕೀಯ ಜೀವನ ಆರಂಭಿಸಿದ್ದೇನೆ. ಇಲ್ಲಿಂದಲೇ ಅಂತ್ಯವಾಗಬಹುದೇನೋ ಎಂಬ ಅನುಮಾನ ವ್ಯಕ್ತಪಡಿಸಿದರಲ್ಲದೆ, ವೇಣುಗೋಪಾಲನ ಕೃಪೆ ಇದ್ದರೆ ಅದು ಮುಂದುವರಿಯಬಹುದು ಎಂಬ ಆಶಾಭಾವನೆ ಕೂಡ ವ್ಯಕ್ತಪಡಿಸಿದರು.

ನನ್ನನ್ನು ರಕ್ಷಣೆ ಮಾಡುವವರು ರಾಜಕೀಯದಲ್ಲಿದ್ದಾರೆ ಎಂದು ಅಂದುಕೊಂಡಿದ್ದೆ. ಆದರೆ, ಅದೆಲ್ಲ ಭ್ರಮೆ ಎಂದು ಈಗ ನನ್ನ ಅರಿವಿಗೆ ಬಂದಿದೆ. ನಾನು ನನ್ನ ಎಲ್ಲ ಆಸೆ-ಆಕಾಂಕ್ಷೆಗಳನ್ನು ಕಳೆದುಕೊಂಡಿದ್ದೇನೆ. ಆದರೆ, ವಿಶ್ವಾಸ ಕಳೆದುಕೊಂಡಿಲ್ಲ. ಪಕ್ಷಕ್ಕಾಗಲಿ, ನಾಯಕರಿಗಾಗಲಿ ಯಾವುದೇ ಮುಜುಗರವಾಗುವಂತಹ ಹೇಳಿಕೆಗಳನ್ನು ನೀಡಿಲ್ಲ. ನಾನು ಏನು ಹೇಳಬೇಕೆಂಬುದನ್ನು ನಾಲ್ಕು ಗೋಡೆಗಳ ಮಧ್ಯೆ ಹೇಳಿದ್ದೇನೆ.

ನನ್ನ ರಕ್ಷಣೆಗೆ ನನ್ನ ದೇವರಾದ ವೇಣುಗೋಪಾಲ ನಿಲ್ಲುತ್ತಾನೆ ಎಂಬ ಭರವಸೆ ನನಗಿದೆ. ಸದ್ಯ ನಾನು ರಾಜಕೀಯವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆ.8ರಂದು ಬಿಎಸ್‍ವೈ ಅವರ ಜತೆ ಚರ್ಚಿಸಿದ್ದೆ. ನಾನು ಏನು ಹೇಳಬೇಕೋ ಅದೆಲ್ಲವನ್ನೂ ಅವರ ಬಳಿ ಹೇಳಿದ್ದೆ ಎಂದು ತಿಳಿಸಿದರು. ಸಾಕಷ್ಟು ಜನ ನನಗೆ ಫೋನ್ ಮಾಡಿದ್ದಾರೆ. ಎಲ್ಲರಿಗೂ ಉತ್ತರ ಕೊಟ್ಟಿದ್ದೇನೆ. ಅವರಲ್ಲಿ ಕ್ಷಮೆ ಕೂಡ ಯಾಚಿಸಿದ್ದೇನೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ಭೇಟಿಗೆ ಹೋಗುವ ಬಗ್ಗೆ ನಿರ್ಧರಿಸಿಲ್ಲ. ಇಂದೇ ಹೋಗಬೇಕಾ ಅಥವಾ ನಾಳೆ ಹೋಗಬೇಕಾ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಹೇಳಿದರು. ಪಕ್ಷಕ್ಕೆ ಮುಜುಗರವಾಗುವ ರೀತಿ ನಾನು ನಡೆದುಕೊಂಡಿಲ್ಲ. ವಿಜಯನಗರ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕನಾಗಿದ್ದೇನೆ. ನಾನೇನು ದೊಡ್ಡ ರಾಜಕಾರಣಿಯಲ್ಲ. ನನ್ನದೇನೂ ದೊಡ್ಡ ಪ್ರಯಾಣವಲ್ಲ. ರಾಜಕೀಯ ಕ್ಷೇತ್ರದಲ್ಲಿ 15 ವರ್ಷ, ಸಾಮಾಜಿಕ ಕ್ಷೇತ್ರದಲ್ಲಿ 5 ವರ್ಷ ಸೇವೆ ಸಲ್ಲಿಸಿದ್ದೇನೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲವನ್ನೂ ಕೊಟ್ಟಿದ್ದಾರೆ. ಜಿಲ್ಲೆಯನ್ನೂ ಕೊಟ್ಟರು, ಏತ ನೀರಾವರಿಯನ್ನೂ ಕೊಟ್ಟರು ಎಂದು ಯಡಿಯೂರಪ್ಪನವರನ್ನು ಪ್ರಶಂಸಿಸಿದರು.

ನಾವು ಯಾವುದೇ ಸಂಕಲ್ಪ ಮಾಡುವುದಾದರೆ ಈ ದೇವಸ್ಥಾನಕ್ಕೆ ಪೂಜೆ ಮಾಡಿದ ನಂತರ ಮಾಡುತ್ತೇವೆ. ಅದೇ ರೀತಿ ಇಂದು ಕೂಡ ಪೂಜೆ ಮಾಡಿ ಪ್ರಾರಂಭಿಸಿದ್ದೇವೆ. ಇಲ್ಲಿಂದ ನನ್ನ ರಾಜಕೀಯ ಅಂತ್ಯವಾಗಬಹುದು ಅಥವಾ ಪುನರಾರಂಭವೂ ಆಗಬಹುದು ಎಂದು ಮಾರ್ಮಿಕವಾಗಿ ಹೇಳಿದರು.

Facebook Comments