ಖಾತೆ ಖ್ಯಾತೆ ತೆಗೆದ ಸಚಿವ ಆನಂದ್ ಸಿಂಗ್‌ಗೆ ಹೈಕಮಾಂಡ್‌ನಿಂದ ಬಿಗ್ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.23- ಬಯಸಿದ ಖಾತೆ ನೀಡಿಲ್ಲ ಎಂದು ಮುನಿಸಿಕೊಂಡು ಖಾತೆ ಬದಲಾವಣೆಗೆ ಒತ್ತಡ ಹೇರಿರುವ ಸಚಿವರಿಗೆ ಬಿಜೆಪಿ ಹೈಕಮಾಂಡ್ ಕೊಟ್ಟ ಜವಾಬ್ದಾರಿ ನಿರ್ವಹಿಸದಿದ್ದರೆ ರಾಜೀನಾಮೆ ಸ್ವೀಕರಿಸುವ ಸಂದೇಶ ರವಾನಿಸಿದೆ.  ಸಚಿವ ಆನಂದ್ ಸಿಂಗ್ ಖಾತೆ ಬದಲಾವಣೆಗೆ ಮತ್ತೆ ಒತ್ತಡ ಹಾಕಿ ರಾಜೀನಾಮೆ ಕೊಡುವ ಬ್ಲಾಕ್ಮೇಲ್ ಮಾಡಿದರೆ, ರಾಜೀನಾಮೆ ಪಡೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಹೈಕಮಾಂಡ್ ಸೂಚನೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಖಾತೆ ಬದಲಾವಣೆಯಿಂದ ಹಿಂದಕ್ಕೆ ಸರಿದಿರುವ ಸಚಿವ ಆನಂದ್ ಸಿಂಗ್ ಇರುವ ಖಾತೆಯಲ್ಲಿಯೇ ಮುಂದುವರೆಯಲು ತೀರ್ಮಾನಿಸಿದ್ದಾರೆ. ಯಾಕೆಂದರೆ ಖಾತೆ ಬದಲಾವಣೆಗೆ ಒತ್ತಾಯಿಸಿ ಯಾರಾದರೂ ರಾಜೀನಾಮೆ ಕೊಟ್ಟಲ್ಲಿ ಅದನ್ನು ಪಡೆದು ಬೇರೆಯವರಿಗೆ ಸಚಿವ ಸ್ಥಾನ ಕೊಡಿ ಎಂದು ಹೈಕಮಾಂಡ್ ಸಿಎಂ ಬೊಮ್ಮಾಯಿ ಅವರಿಗೆ ಸೂಚನೆ ಕೊಟ್ಟಿದೆ ಎಂಬ ಮಾಹಿತಿಯಿದೆ.

ಸಚಿವರಾದ ಎಂ.ಟಿ.ಬಿ. ನಾಗರಾಜ, ಬಿ.ಶ್ರೀರಾಮುಲು ಅವರೂ ಖಾತೆ ಹಂಚಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇಬ್ಬರೂ ಸಚಿವರು ಮಾಜಿ ಸಿಎಂ ಯಡಿಯೂರಪ್ಪ ಜೊತೆಗೆ ಚರ್ಚಿಸಿದ ಬಳಿಕ ಸುಮ್ಮನಾಗಿದ್ದಾರೆ. ಆದರೆ ಆನಂದ್ ಸಿಂಗ್ ಮಾತ್ರ ಸಂಪುಟ ಸಭೆಗೂ ಹಾಜರಾಗದೇ ತಮ್ಮ ಅಸಮಾಧಾನ ಮುಂದುವರೆಸಿದ್ದಾರೆ. ಖಾತೆ ಬದಲಾವಣೆ ಕುರಿತು ಆನಂದ್ ಸಿಂಗ್ ನೀಡಿದ್ದ ಗಡುವಿನ ಅವಧಿ ಮುಗಿದಿದೆ. ಹೀಗಾಗಿ ತಮಗೆ ಇನ್ನೂ ಉತ್ತರ ಬಂದಿಲ್ಲ ಎಂದು ಹೇಳಿ ಕೊಂಡಿದ್ದಾರೆ.

ಜೊತೆಗೆ ಪಿಚ್ಚರ್ ಅಭೀ ಬಿ ಬಾಕಿ ಹೈ ಎಂದು ಹೇಳುವುದರೊಂದಿಗೆ ಮತ್ತೆ ಬಿಜೆಪಿಯಲ್ಲಿ ಚರ್ಚೆ ಹುಟ್ಟು ಹಾಕಿದ್ದಾರೆ. ಆದರೆ ಪಕ್ಷದ ಮೂಲಗಳ ಪ್ರಕಾರ ಖಾತೆ ಬದಲಾವಣೆಗೆ ಸಚಿವ ಆನಂದ್ ಹೀಗೆ ಪಟ್ಟು ಹಿಡಿದಲ್ಲಿ ಏನು ಮಾಡಬೇಕು ಎಂಬ ಸೂಚನೆಯನ್ನು ಹೈಕಮಾಂಡ್ ಸಿಎಂ ಬೊಮ್ಮಾಯಿ ಅವರಿಗೆ ರವಾನಿಸಿದೆ ಎನ್ನಲಾಗಿದೆ. ಖಾತೆ ಹಂಚಿಕೆ ಅಸಮಾಧಾನ ಹೆಚ್ಚಾಗದಂತೆ ಹೈಕಮಾಂಡ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೊನೆಯೆ ಸಂದೇಶವನ್ನು ಕೊಟ್ಟಿದೆ ಎಂಬ ಮಾಹಿತಿ ಬಂದಿದೆ. ಹೀಗಾಗಿ ಬಿಜೆಪಿಯಲ್ಲಿ ಮುಂದೇನಾಗಬಹುದು? ಎಂಬ ಬಿಸಿಬಿಸಿ ಚರ್ಚೆ ಶುರುವಾಗಿದೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ತಾವು ಬಯಸಿದ ಖಾತೆ ನೀಡುವಂತೆ ಆನಂದ್ ಸಿಂಗ್, ಎಂ.ಟಿ.ಬಿ. ನಾಗರಾಜ್ ಸೇರಿದಂತೆ ಕೆಲವರು ಪಟ್ಟು ಹಿಡಿದು ಸಿಎಂ ಬೊಮ್ಮಾಯಿಗೆ ಸಮಸ್ಯೆಯನ್ನುಂಟು ಮಾಡಿದ್ದರು. ಕೊನೆಗೆ ಎಂ.ಟಿ.ಬಿ. ನಾಗರಾಜ ಈಗಿರುವ ಖಾತೆಯಲ್ಲಿಯೇ ಮುಂದುವರೆಯುವುದಾಗಿ ಹೇಳಿಕೊಂಡಿದ್ದರು. ಆದರೆ ಆನಂದ್ ಸಿಂಗ್ ಮಾತ್ರ ಸಿಎಂಗೆ ಖಾತೆ ಬದಲಾವಣೆಗೆ ಗಡುವು ನೀಡಿದ್ದರು. ಜೊತೆಗೆ ಹೈಕಮಾಂಡ್ ಭೇಟಿಗೂ ಹೋಗುವುದಾಗಿ ಹೇಳಿದ್ದರು.

ಹೈಕಮಾಂಡ್ ಸಂದೇಶದ ಹಿನ್ನೆಲೆಯಲ್ಲಿಯೇ ತಮ್ಮ ಖಾತೆ ಬದಲಾಯಿಸದಿದ್ದರೆ ತಮ್ಮ ನಡೆ ಬೇರೆ ಇರುತ್ತದೆ ಎಂದು ಹೇಳಿಕೆ ಕೊಟ್ಟಿದ್ದ ಸಚಿವ ಎಂ.ಟಿ.ಬಿ.ನಾಗರಾಜ್ ಅವರನ್ನು ಸಚಿವ ಆರ್.ಅಶೋಕ್ ಮನವೊಲಿಸುವ ಮೂಲಕ ಸಮಾಧಾನ ಮಾಡಿದ್ದರು. ಜೊತೆಗೆ ಹೈಕಮಾಂಡ್ ಕುರಿತು ವಿವರಿಸಿದ್ದರು. ಹೀಗಾಗಿ ಸದ್ಯಕ್ಕೆ ಎಂ.ಟಿ.ಬಿ ನಾಗರಾಜ ತಮಗೆ ಕೊಟ್ಟಿದ್ದ ಖಾತೆಯಲ್ಲಿಯೇ ಮುಂದುವರೆದಿದ್ದಾರೆ. ಇದೇ ಎಚ್ಚರಿಕೆಯನ್ನು ಈಗ ಆನಂದ್ ಸಿಂಗ್‍ಗೆ ಕೊಡಲಾಗಿದೆ.

ಆನಂದ್ ಸಿಂಗ್ ಅಸಮಾಧನದ ಬಗ್ಗೆ ಮಾತನಾಡಿರುವ ಬಿಜೆಪಿ ಶಾಸಕ ರಾಜೂಗೌಡ, ಆನಂದ್ ಸಿಂಗ್ ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಕೂಡ ಬರುತ್ತಾರೆ. ನಾವೂ ಕೂಡ ಸಚಿವ ಸ್ಥಾನದಲ್ಲಿ ಮುಂದುವರೆಯುವಂತೆ ಸೂಚಿಸಿದ್ದೇವೆ. ಖಾತೆ ಹಂಚಿಕೆಯಲ್ಲಿ ಅವರಿಗೆ ಅಸಮಧಾನ ಇರುವುದು ಸತ್ಯ. ಆದರೆ,ಅದನ್ನು ಹೈಕಮಾಂಡ್ ಬದಲಿಗೆ, ಮುಖ್ಯಮಂತ್ರಿಗಳ ಬಳಿಯೇ ಚರ್ಚಿಸಿ ಬಗೆಹರಿಸಿಕೊಳ್ಳೋದಾಗಿ ಹೇಳಿದ್ದಾರೆ.

ಆನಂದ್ ಸಿಂಗ್ ಪಿಚ್ಚರ್ ಅಭೀ ಬಿ ಬಾಕಿ ಹೈ ಎಂದು ಹೇಳಿದ್ದರು. ಥಿಯೇಟರ್ ಬಂದ್ ಹೈ, ಪಿಚ್ಚರ್ ಕೇಸಾ ಚಾಲೂ ಹೋತಾ ಹೈ? ಅಂತ ನಾವು ಕಾಲೆಳೆದಿದ್ದೇವೆ ಎಂದು ರಾಜೂಗೌಡ ನಗುತ್ತ ಮಾತನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Facebook Comments