ಯಾವುದೇ ಅವ್ಯವಹಾರ ನಡೆದಿಲ್ಲ, ದಾಖಲೆಗಳಿದ್ದರೆ ಬಹಿರಂಗಪಡಿಸಲಿ : ಅಶೋಕ್ ಸವಾಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.9- ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಒಂದು ವೇಳೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಬಳಿ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಕಂದಾಯ ಸಚಿವ ಆರ್.ಅಶೋಕ್ ಸವಾಲು ಹಾಕಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಖರೀದಿಸಿರುವ ವೈದ್ಯಕೀಯ ಪರಿಕರಗಳಲ್ಲಿ ಹಗರಣ ನಡೆದಿರುವುದಕ್ಕೆ ದಾಖಲೆಗಳು ಸಿದ್ದರಾಮಯ್ಯನವರ ಬಳಿ ಇದ್ದರೆ ಅದನ್ನು ಬಹಿರಂಗಪಡಿಸಲು ತಡವೇಕೆ ಎಂದು ಪ್ರಶ್ನಿಸಿದರು.

ಖರೀದಿಯಲ್ಲಿ ಒಂದೇ ಒಂದು ನಯಾಪೈಸೆ ಭ್ರಷ್ಟಾಚಾರ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿಯೇ ನಡೆದಿದೆ. ಸಿದ್ದರಾಮಯ್ಯನವರು ಕೇವಲ ಆರೋಪ ಮಾಡಬೇಕೆಂಬ ಕಾರಣಕ್ಕಾಗಿ ಆಧಾರರಹಿತ ಆರೋಪ ಮಾಡಿದ್ದಾರೆ ಎಂದು ದೂರಿದರು.  ನಮ್ಮ ಪಕ್ಷದ ಮುಖಂಡರಾದ ಮುರುಗೇಶ್ ನಿರಾಣಿ ಬಳಿ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಪೆನ್ ಡ್ರೈವ್ ಇಲ್ಲ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕ ಲೆಕ್ಕ ಸಮಿತಿ ನಡಾವಳಿಯಲ್ಲಿ ಇದನ್ನು ಪ್ರಸ್ತಾಪ ಮಾಡಲಾಗಿದ್ದು, ಸಿದ್ದರಾಮಯ್ಯನವರು ಇದನ್ನು ಟ್ವಿಟರ್‍ನಲ್ಲಿ ಹಾಕಿಕೊಂಡಿದ್ದಾರೆ. ಸ್ವತಃ ನಿರಾಣಿಯವರೇ ಇದನ್ನು ನಿರಾಕರಿಸಿರುವಾಗ ಸಿದ್ದರಾಮಯ್ಯನವರಿಗೆ ಪ್ರಶ್ನಿಸುವ ಅಧಿಕಾರವೇ ಇಲ್ಲ ಎಂದರು.

ನನ್ನ ಪೆನ್‍ನಲ್ಲಿ ಇಂಕ್ ಖಾಲಿಯಾಗಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರ ಕಾಲೆಳೆದರು. ಇನ್ನು ಕೊರೊನಾ ನಿಯಂತ್ರಣಕ್ಕಾಗಿ ನಾಳೆ ಮುಖ್ಯಮಂತ್ರಿಗಳು ಬೆಂಗಳೂರು ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಅಲ್ಲಿ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದರು.

Facebook Comments