ತಹಸೀಲ್ದಾರ್ ಹತ್ಯೆಗೈದ ಆರೋಪಿ ವಿರುದ್ಧ ಗೂಂಡಾ ಕಾಯ್ದೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.10- ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ತಹಸೀಲ್ದಾರ್ ಚಂದ್ರಮೌಳೇಶ್ವರ ಅವರನ್ನು ಹತ್ಯೆಗೈದ ಆರೋಪಿ ವಿರುದ್ಧ ಗೂಂಡಾ ಕಾಯ್ದೆ ದಾಖಲಿ ಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಸಂಭವಿಸದಂತೆ ಎಚ್ಚರ ವಹಿಸಬೇಕಾದ ಅಗತ್ಯವಿದೆ. ಹೀಗಾಗಿ ತಪ್ಪಿತಸ್ಥ ಆರೋಪಿ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ವಿಚಾರಣೆ ನಡೆಸುವುದಾಗಿ ತಿಳಿಸಿದರು.

ಈಗಾಗಲೇ ಘಟನೆ ಸಂಬಂಧ ಅಲ್ಲಿನ ಜಿಲ್ಲಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಈಗಿರುವ ಕಾನೂನನ್ನು ಇನ್ನಷ್ಟು ಬಿಗಿ ಮಾಡಲಿದ್ದೇವೆ. ಇನ್ನುಮುಂದೆ ಯಾರಾದರೂ ಇಂತಹ ಬರ್ಭರ ಕೃತ್ಯ ನಡೆಸಿದರೆ ಕಾನೂನು ಪ್ರಕಾರವೇ ಕಠಿಣ ಶಿಕ್ಷೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಮೃತ ತಹಸೀಲ್ದಾರ್ ಚಂದ್ರಮೌಳೇಶ್ವರ ಕುಟುಂಬಕ್ಕೆ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರು 25 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವುದಾಗಿಯೂ ಹೇಳಿದ್ದಾರೆ. ಆದಷ್ಟು ಶೀಘ್ರ ಈ ಪ್ರಕ್ರಿಯೆ ಮುಗಿಯಲಿದೆ ಎಂದರು.

ನಿನ್ನೆ ಬಂಗಾರಪೇಟೆ ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಳವಂಚಿ ಗ್ರಾಮದ ರಾಮಮೂರ್ತಿ ಮತ್ತು ವೆಂಕಟಾಚಲಪತಿ ಎಂಬುವರ ನಡುವೆ ಸರ್ವೆ ನಂ. 5/4ರ ವಿಚಾರವಾಗಿ ವಿವಾದ ಉಂಟಾಗಿತ್ತು.

ಈ ಜಾಗವನ್ನು ಸರ್ವೆ ಮಾಡಲು ತೆರಳಿದ ವೇಳೆ ತಹಸೀಲ್ದಾರ್ ಚಂದ್ರಮೌಳೇಶ್ವರ ಅವರನ್ನು ವೆಂಕಟಾಚಲಪತಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದ. ಚಂದ್ರಮೌಳೇಶ್ವರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

Facebook Comments