ಲಾಕ್‍ಡೌನ್ ಕುರಿತು ಅಡ್ಡ ಗೋಡೆ ಮೇಲೆ ದೀಪ ಇಟ್ಟ ಸಚಿವ ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.30-ರೂಪಾಂತರಗೊಂಡ ಬ್ರಿಟನ್ ಮೂಲದ ಕೊರೊನಾ ಸೋಂಕು ಪತ್ತೆಯಾಗಿರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮಾಡಬೇಕೆ? ಬೇಡವೆ ಎಂಬ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಇಡೀ ರಾಜ್ಯದಲ್ಲಿ ಲಾಕ್‍ಡೌನ್ ಮಾಡುವ ಅಗತ್ಯವಿಲ್ಲ. ಸದ್ಯಕ್ಕೆ ಲಾಕ್‍ಡೌನ್ ಮಾಡುವ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ. ಸೋಂಕು ಹೆಚ್ಚಾದರೆ ಆಗ ಸಂಬಂಧಿಸಿದ ಜಿಲ್ಲೆಗಳಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ರಿಯಲ್ ನೈಟ್ ಕಫ್ರ್ಯೂ ಜಾರಿ ಅಗತ್ಯವಿದೆ ಜೊತೆಗೆ ನಿರ್ಬಂಧಗಳನ್ನು ಬಿಗಿಯಾಗಿ ಜಾರಿಗೊಳಿಸಬೇಕಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು.  ಗ್ರಾಮಪಂಚಾಯ್ತಿ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಎಲ್ಲೆಡೆ ಬಿಜೆಪಿ ಶಕ್ತಿ ಎದ್ದು ಕಾಣುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಗ್ರಾಮಪಂಚಾಯ್ತಿ ಮಟ್ಟದಲ್ಲಿ ಬಿಜೆಪಿ ಹಿಡಿತ ಸಾಧಿಸುತ್ತಿದ್ದು, ಕಾಂಗ್ರೆಸ್‍ಗೆ ಹಿನ್ನಡೆ ಕಂಡುಬರುತ್ತಿದೆ. ಇದು ಮುಂದೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲು ಹಾಗೂ ಜನರ ಧ್ವನಿಯಾಗಿ ನಾವು ಕೆಲಸ ಮಾಡಲು ಉತ್ತೇಜನ ನೀಡಿದಂತಾಗಿದೆ ಎಂದರು.

ಶಾಲಾಕಾಲೇಜು ಆರಂಭದ ಬಗ್ಗೆ ಗೊಂದಲ ಇರುವುದು ನಿಜ. ಈ ಬಗ್ಗೆ ಶಿಕ್ಷಣ ಸಚಿವರು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಸ್ಪಷ್ಟ ತೀರ್ಮಾನ ಕೈಗೊಳ್ಳುತ್ತಾರೆ. ಶಾಲೆ ಪ್ರಾರಂಭಕ್ಕೆ ಕೆಲವು ಒತ್ತಾಯಿಸಿದರೆ ಕೆಲವು ಶಾಲೆ ಆರಂಭಿಸುವುದು ಬೇಡ ಎನ್ನುತ್ತಾರೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಶಾಲೆ ಆರಂಭವಾಗಿದೆ. ಈ ವಿಚಾರದ ಗೊಂದಲ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Facebook Comments