ತಿಂಗಳ 3ನೇ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ : ಸಚಿವ ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.21- ಆಡಳಿತವನ್ನು ಜನರ ಬಳಿಗೆ ಕೊಂಡೊಯ್ದು ಅವರ ಸಮಸ್ಯೆಗಳನ್ನು ತಳ ಮಟ್ಟದಿಂದಲೇ ಪರಿಹರಿಸುವ ನಿಟ್ಟಿನಲ್ಲಿ ಇನ್ನು ಮುಂದೆ ಪ್ರತಿ ತಿಂಗಳ ಮೂರನೇ ಶನಿವಾರದಂದು ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮಗಳಿಗೆ ಭೇಟಿ ನೀಡಲೇಬೇಕು. ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಎಂಬ ನೂತನ ಕಾರ್ಯಕ್ರಮವು ಮುಂಬರುವ ಫೆಬ್ರವರಿ ಮೂರನೇ ಶನಿವಾರದಂದು ರಾಜ್ಯಾದ್ಯಂತ ಅಧಿಕೃತವಾಗಿ ಜಾರಿಗೆ ಬರಲಿದೆ.

ಇದರ ಪ್ರಕಾರ ಜಿಲ್ಲಾಧಿಕಾರಿಗಳು, ತಹಸೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಸಹಾಯಕ ಆಯುಕ್ತರು, ಭೂ ದಾಖಲೆಗಳ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು ಪ್ರತಿ ತಿಂಗಳ ಮೂರನೇ ಶನಿವಾರದಂದು ಕಡ್ಡಾಯವಾಗಿ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹರಿಸಬೇಕು.

ಸುದ್ದಿಗೋಷ್ಠಿಯಲ್ಲಿ ಈ ಕುರಿತುಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಅವರು, ಅಧಿಕಾರಿಗಳು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಗ್ರಾಮಗಳಲ್ಲಿ ವಾಸ್ತವ್ಯ ಹೂಡಬೇಕು. ಜಿಲ್ಲಾಧಿಕಾರಿಗಳು ಯಾವ ತಾಲ್ಲೂಕಿಗೆ ಭೇಟಿ ನೀಡುತ್ತಾರೆ, ಯಾವ ಸಮಯ, ಯಾವ ದಿನಾಂಕ ಎಂಬುದನ್ನು ಮುಂಚಿತವಾಗಿಯೇ ತಿಳಿಸಬೇಕು. ಜಿಲ್ಲಾಧಿಕಾರಿ ಹೊರತು ಪಡಿಸಿದರೆ ಆಯಾ ತಾಲ್ಲೂಕಿನ ತಹಸೀಲ್ದಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಬೇರೆ ಬೇರೆ ಗ್ರಾಮಗಳಿಗೆ ಭೇಟಿ ಕೊಟ್ಟು ಜನರ ಸಮಸ್ಯೆಗಳನ್ನು ಆಲಿಸಬೇಕೆಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ಕೊಟ್ಟ ವೇಳೆ ಯಾವುದೇ ಗಣ್ಯವ್ಯಕ್ತಿಗಳ ಮನೆಯಲ್ಲಿ ಊಟ ಸೇವಿಸಬಾರದು. ಸರ್ಕಾರಿ ಶಾಲೆ ಅಥವಾ ಅಂಗನವಾಡಿ ಕೇಂದ್ರ ಇಲ್ಲವೇ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ನಿಲಯಗಳಲ್ಲಿ ಊಟ ಮಾಡಬೇಕು. ಅಲ್ಲಿನ ಸ್ಥಿತಿಗತಿ ಕುರಿತಂತೆ ಸರ್ಕಾರಕ್ಕೆ ವರದಿ ನೀಡಬೇಕೆಂದು ಹೇಳಿದರು.

ಇನ್ನು ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಅಧಿಕಾರಿಗಳು ಫಲಾನುಭವಿಗಳ ಅರ್ಜಿಯನ್ನು ಸಂಗ್ರಹಿಸಬೇಕು. ಪಿಂಚಣಿ, ವಿಧವಾ ವೇತನ, ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್, ಆಶ್ರಯ ಮನೆ ಯೋಜನೆ, ಸರ್ಕಾರಿ ಜಮೀನು ಒತ್ತುವರಿ, ಸ್ಮಶನಗಳು, ಆಧಾರ್ ಕಾರ್ಡ್ ಪರಿಶೀಲನೆ, ಮತದಾರರ ಪಟ್ಟಿ, ಬರ/ ಪ್ರವಾಹ ಪರಿಸ್ಥಿತಿ ಇದ್ದಲ್ಲಿ ಪರಿಹಾರ, ಅತಿವೃಷ್ಟಿ , ಅನಾವೃಷ್ಟಿ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಸೂಚಿಸಿದರು.

ಗ್ರಾಮದಲ್ಲಿ ಎಸ್ಸಿ-ಎಸ್ಟಿ, ಬಿಸಿಎಂ ವಸತಿ ನಿಲಯಗಳಿದ್ದರೆ ಅಲ್ಲಿಗೆ ಭೇಟಿ ಕೊಡುವುದು, ಶಾಲಾ, ಅಂಗನವಾಡಿಗಳಿಗೂ ಹೋಗಿ ಆಹಾರ, ಕಲಿಕಾ ಕ್ರಮ ಪರಿಶೀಲಿಸುವುದು. ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಇರುವ ಬಗ್ಗೆ ಖಚಿತ ಪಡಿಸುವುದು, ಗುಡಿಸಲು ರಹಿತ ವಾಸದ ಮನೆಗಳ ನಿರ್ಮಾಣ, ಸರ್ಕಾರದ ವಿವಿಧ ಯೋಜನೆಗಳಡಿ ಮನೆ ಕಟ್ಟಲು ಅನುದಾನ ನೀಡುವುದು ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಅಧಿಕಾರಿಗಳು ನಿರ್ವಹಣೆ ಮಾಡಬೇಕೆಂದು ಸೂಚನೆ ಕೊಟ್ಟರು.

ಇದು ಅತ್ಯಂತ ಮಹತ್ವದ ಯೋಜನೆಯಾಗಿದೆ. ಸರ್ಕಾರದಿಂದ ಸೌಲಭ್ಯ ಪಡೆಯುವವರು, ಪಿಂಚಣಿ ಸೌಲಭ್ಯ ಪಡೆಯುವವರು ದಾಖಲೆಗಳನ್ನು ಮಾಡಿಸಿಕೊಳ್ಳಲು ಒಂದರಿಂದ ಮತ್ತೊಂದು ಇಲಾಖೆಗೆ ಅಲೆಯಬೇಕು. ಈಗ ಅಧಿಕಾರಿಗಳು ಮನೆ ಬಾಗಿಲಿಗೆ ಬರುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು. ಪ್ರತಿ ತಿಂಗಳ ಮೂರನೇ ಶನಿವಾರದಂದು ಆಯಾ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ವಾಸ್ತವ್ಯ ಹೂಡಬೇಕು. ಇದರಿಂದ ಸರ್ಕಾರದ ಆಡಳಿತದ ಯಂತ್ರ ಮನೆ ಬಾಗಿಲಿಗೆ ಬರಲಿದೆ ಎಂದು ಅಶೋಕ್ ಅಭಿಪ್ರಾಯಪಟ್ಟರು.

ನಾನೂ ಕೂಡ ಹಳ್ಳಿಗಳಿಗೆ ಹೋಗುತ್ತೇನೆ. ಅಲ್ಲಿನ ಜನರ ಸಂಕಷ್ಟಗಳನ್ನು ಆಲಿಸಿ ಪರಿಹರಿಸುತ್ತೇನೆ ಎಂದರು. ಬ್ರೋಕರ್‍ಗಳಿಗೆ ಕಡಿವಾಣ: ಪಿಂಚಣಿ ಸೌಲಭ್ಯ ಪಡೆಯುವವರು ಇನ್ನು ಮುಂದೆ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿಯೇ ಸೌಲಭ್ಯ ಪಡೆಯಬಹುದುದಾಗಿದೆ. ವಿಧವಾ ವೇತನ, ಹಿರಿಯ ನಾಗರಿಕರ ಮಾಶಸನ ಸೇರಿದಂತೆ ಮತ್ತಿತರ ಸೌಲಭ್ಯವನ್ನು ಪಡೆಯಲು ಒಂದೇ ಆ್ಯಪ್ ಜಾರಿಗೆ ತರಲಿದ್ದೇವೆ.

60 ವರ್ಷ ದಾಟಿದವರು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಂಡರೆ ಸಾಕು ಫಲಾನುಭವಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಪಾಸ್‍ಬುಕ್ ನೀಡಿದರೆ ಅದರ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಪಿಂಚಣಿ ಜಮೆಯಾಗಲಿದೆ ಎಂದು ಮಾಹಿತಿ ನೀಡಿದರು. ಕಳೆದ ವರ್ಷ ರಾಜ್ಯದ ವಿವಿಧೆಡೆ ಭೀಕರ ಪ್ರವಾಹ ಉಂಟಾಗಿ ಮನೆ, ಮಠ, ಜಾನುವಾರಗಳನ್ನು ಕಳೆದುಕೊಂಡು ಸಂತ್ರಸ್ತರಾಗಿರುವವರಿಗೆ ತಕ್ಷಣವೇ ಪರಿಹಾರ ಬಿಡುಗಡೆ ಮಾಡಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದಲ್ಲಿ 9,22,631 ಫಲಾನುಭವಿಗಳಿಗೆ 709.67 ಕೋಟಿ ಪರಿಹಾರವನ್ನು ನೇರವಾಗಿ ಆರ್‍ಟಿಜಿಎಸ್ ಮೂಲಕ ಅವರವರ ಖಾತೆಗಳಿಗೆ ಜಮಾವಣೆ ಮಾಡಿದ್ದೇವೆ. ಮೊದಲ ಹಂತದಲ್ಲಿ 51,812 ರೈತರಿಗೆ 36.58 ಕೋಟಿ, ಎರಡನೇ ಹಂತದಲ್ಲಿ 85,906 ರೈತರಿಗೆ 70 ಕೋಟಿ, ಮೂರನೇ ಹಂತದಲ್ಲಿ 1,18,680 ರೈತರಿಗೆ 96 ಕೋಟಿ , ನಾಲ್ಕನೇ ಹಂತದಲ್ಲಿ 1,82,000 ರೈತರಿಗೆ 147 ಕೋಟಿ, ಐದನೇ ಹಂತದಲ್ಲಿ 2,74,000 ರೈತರಿಗೆ 199 ಕೋಟಿ ಹಾಗೂ ಆರನೇ ಹಂತದಲ್ಲಿ 2,90,000 ರೈತರಿಗೆ 158 ಕೋಟಿ ಪರಿಹಾರ ನೀಡಲಾಗಿದೆ.
ಸರ್ವೆಯರ್‍ಗಳ ನೇಮಕ: ಸರ್ಕಾರಿ ಭೂಮಿ ಒತ್ತುವರಿ ಜಾಗದಲ್ಲಿ ತಂತಿ ಬೇಲಿ ನಿರ್ಮಾಣ ಮಾಡಲಾಗುವುದು. ಇದರ ಜತೆಗೆ ಲೈಸೆನ್ಸ್ ಹೊಂದಿದ 2074 ಸರ್ವೆಯರ್‍ಗಳನ್ನು ಭರ್ತಿ ಮಾಡಿಕೊಳ್ಳಲು ಆದೇಶ ಹೊರಡಿಸಲಾಗಿದೆ ಎಂದರು.

ಫೆ.3ರಿಂದ 5ರವರೆಗೆ ಯಲಹಂಕದ ವಾಯು ನೆಲೆಯಲ್ಲಿ ನಡೆಯಲಿರುವ ಪ್ರತಿಷ್ಠಿತ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನದ ವೇಳೆ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ಕೇಂದ್ರವನ್ನು ಇದೇ ಮೊದಲ ಬಾರಿಗೆ ತೆರೆಯಲಿದೆ ಎಂದರು. ಈ ವಿಪತ್ತು ನಿರ್ವಹಣ ಕೇಂದ್ರವು ಯಾವುದೇ ರೀತಿಯ ವಿಪತ್ತು ಸಂಭವಿಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು, ಅವಘಡ ಸಂಭವಿಸಿದರೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ವಿಪತ್ತು ನಿರ್ವಹಣೆ ಯೋಜನೆಯಲ್ಲಿ ಒಳಾಂಗಣ ವಿಪತ್ತು ನಿರ್ವಹಣೆ ಯೋಜನೆ ಆರಂಭಿಸಲಾಗಿದೆ. ಪ್ರಮುಖವಾಗಿ ವಿಫತ್ತುಗಳನ್ನು ತಡೆಗಟ್ಟುವುದು, ವಿಪತ್ತಿನಿಂದ ಜನ ಸಾಮಾನ್ಯರಿಗೆ ಹಾಗೂ ಆಸ್ತಿ ಮೇಲೆ ಆಗುವ ಪರಿಣಾಮಗಳನ್ನು ತಗ್ಗಿಸುವುದು ವಿಪತ್ತು ಬಾದಿತ ಜನರನ್ನು ರಕ್ಷಿಸುವುದು, ಅಪಘಾತ ಸ್ಥಳದಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು ಸೇರಿದಂತೆ ಮತ್ತಿತರರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಕಂದಾಯ ಇಲಾಖೆ, ಗೃಹ ಇಲಾಖೆ, ಮೂಲಸೌಲಭ್ಯ ಅಭಿವೃದ್ಧಿ, ಒಳನಾಡು ಜಲ ಸಾರಿಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ , ಲೋಕೋಪಯೋಗಿ, ಇಂಧನ ಹಾಗೂ ಬಿಬಿಎಂಪಿ, ಬಿಡಬ್ಲ್ಯೂಎಸ್‍ಎಸ್‍ಬಿ ಕಾರ್ಯ ನಿರ್ವಹಿಸಲಿವೆ. ಇದೇ ಮೊದಲ ಬಾರಿಗೆ ವಿಶೇಷ ಭೌಗೋಳಿಕ ಮಾಹಿತಿ ವ್ಯವಸ್ಥೆಯ ಅಂತರ್ಜಾಲ ತಾಣವನ್ನು ಆರಂಭಿಸಲಾಗಿದೆ. ಇದರಲ್ಲಿ ಒಳಂಗಾಣ, ಹೊರಾಂಗಣ ವಿಪತ್ತು ನಿರ್ವಹಣೆ ಯೋಜನೆ ಮತ್ತಿತರ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು.

ಪ್ರಮುಖವಾಗಿ ಕೋವಿಡ್-19, ಬೆಂಕಿ ಅವಘಡ, ಕಾಲ್ತುಳಿತ, ವಿಮಾನ ಅಪಘಾತ, ಅಣುವಿಕಿರಣ ಅಪಾಯಗಳು, ಭಯೋತ್ಪಾನೆ ಕೃತ್ಯ, ಡ್ರೋಣ್ ದಾಳಿ, ಸೈಬರ್ ದಾಳಿ, ಹವಮಾನ ವೈಪರೀತ್ಯ , ಕುಡಿಯುವ ನೀರು, ಅಪಾಯ ಸೇರಿದಂತೆ ಸಂಭವನೀಯ ವಿಪತ್ತುಗಳನ್ನು ತಡೆಯಲು ಸಾಧ್ಯವಾಗುತ್ತದೆ.

ಸಿಎಂ ಪರಮಾಧಿಕಾರ: ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆಗಳ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು, ಎಲ್ಲವೂ ಶೀಘ್ರದಲ್ಲೇ ಇತ್ಯರ್ಥವಾಗಲಿದೆ ಎಂದು ಇದೇ ವೇಳೆ ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು. ಕೆಲವು ಸಂದರ್ಭಗಳಲ್ಲಿ ನಿರೀಕ್ಷಿತ ಸ್ಥಾನಮಾನ ಸಿಗದಿದ್ದಾರೆ ಅಸಮಾಧಾನವಾಗುವುದು ಸರ್ವೆ ಸಾಮಾನ್ಯ. ಸಂಪುಟ ವಿಸ್ತರಣೆ ಹಾಗೂ ಸಚಿವರಗೆ ಖಾತೆಗಳ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. ಇದನ್ನು ಪ್ರಶ್ನೆ ಮಾಡುವಂತಿಲ್ಲ ಎಂದರು.

ಈಗಾಗಲೇ ಅನೇಕ ಸಚಿವರ ಜತೆ ಮಾತುಕತೆ ನಡಸಿದ್ದೇನೆ. ಮುಖ್ಯಮಂತ್ರಿಗಳು ಕೂಡಾ ಮಾತನಾಡುತ್ತಾರೆ. ಯಾವ ಸಮಸ್ಯೆಯೂ ಬರುವುದಿಲ್ಲ. ಸಣ್ಣಪುಟ್ಟ ಗೊಂದಲಗಳಿದ್ದರೆ ಇತ್ಯರ್ಥವಾಗಲಿವೆ ಎಂದು ಹೇಳಿದರು.

Facebook Comments