ಸದ್ಯಕ್ಕೆ ಶಾಲೆಗಳನ್ನು ಮುಚ್ಚಲ್ಲ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.9- ರಾಜ್ಯದಲ್ಲಿ ಕಡಿಮೆ ಕೋವಿಡ್ ಸೋಂಕು ಇರುವುದರಿಂದ ಯಾವುದೇ ಶಾಲೆಯನ್ನು ಮುಚ್ಚುವುದಿಲ್ಲ. ಚಾಲ್ತಿಯಲ್ಲಿರುವ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದೆರಡು ದಿನಗಳಿಂದ ಕೋವಿಡ್ ಸಂಖ್ಯೆ ಇಳಿಮುಖವಾಗಿದೆ. ವಸತಿ ಶಾಲೆಗಳಿಗೆ ಹೆಚ್ಚು ಮಹತ್ವ ನೀಡಿದ್ದು, ಅದರ ನಿರ್ವಹಣೆ ಮಾಡಲು ಬಿಇಒ ಮತ್ತು ಟಿಎಚ್‍ಒ ನೇತೃತ್ವದ ಸಮಿತಿ ತಪಾಸಣೆ ಮಾಡಲಿದೆ ಎಂದರು.

ಇದುವರೆಗೆ 172 ಶಿಕ್ಷಕರು ಮತ್ತು ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ನೂರು ಮಕ್ಕಳು ಈಗಾಗಲೇ ಚೇತರಿಸಿಕೊಂಡಿದ್ದಾರೆ. ಹಾಸ್ಟೆಲ್‍ಗಳಲ್ಲಿ ಒಟ್ಟಾಗಿ ಊಟಕ್ಕೆ ಹೋಗಬಾರದು, ಅಂತರ ಕಾಪಾಡಿಕೊಂಡು ಊಟ ಮಾಡಬೇಕು. ಸ್ನಾನಕ್ಕೆ ಹೋಗುವಾಗಲೂ ಒಟ್ಟಿಗೆ ಹೋಗಬಾರದು, ಮಲಗುವಾಗಲೂ ಸಾಧ್ಯವಾದಷ್ಟು ದೂರ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆಯೇ ಹೊರತು ಮಾರ್ಗಸೂಚಿ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.

1 ರಿಂದ 10ನೆ ತರಗತಿವರೆಗಿನ ಶಾಲಾ ಮಕ್ಕಳಲ್ಲಿ ಕೋವಿಡ್ ಕಂಡುಬಂದಿಲ್ಲ. ಪಿಯುಸಿ ಕಾಲೇಜಿನಲ್ಲಿ ಮಾತ್ರ ಸೋಂಕು ಕಂಡುಬಂದಿದ್ದು, ಅವರೆಲ್ಲರೂ ಆರೋಗ್ಯವಾಗಿದ್ದಾರೆ. 8 ವಸತಿ ಶಾಲೆಗಳಲ್ಲಿ ಕೋವಿಡ್ ಹೆಚ್ಚಾಗಿದ್ದು, ಪರಿಣಿತರ ಸಮಿತಿಯನ್ನು ಎಸ್‍ಒಪಿ ಬಗ್ಗೆ ಕೇಳಿದ್ದವು. ಆದರೆ, ವೈದ್ಯರು ಬೇಡವೆಂದು ಹೇಳಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಸಮಿತಿ ಮಾಡಿ ಹಾಸ್ಟೆಲ್ ಮತ್ತು ಶಾಲೆಗಳಿಗೆ ತೆರಳಿ ತಪಾಸಣೆ ನಡೆಸಲು ನಿರ್ದೇಶನ ನೀಡಲಾಗಿದೆ.

ಹೀಗಾಗಿ ಜಂಟಿ ಸಮಿತಿ ಮೂಲಕ ಕಠಿಣ ಕ್ರಮ ಜಾರಿ ಮಾಡಲಾಗುತ್ತದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಧ್ಯವಾರ್ಷಿಕ ಪರೀಕ್ಷೆ ನಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ಸರಿಯಾಗಿ ಪರೀಕ್ಷೆ ನಡೆದಿರಲಿಲ್ಲ. ಹೀಗಾಗಿ ಸುಸೂತ್ರವಾಗಿ ಪರೀಕ್ಷೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

Facebook Comments