ಸಚಿವ ಭಗವಂತ ಕೂಬಾ ಯಾವ ಗ್ರಹದಲ್ಲಿದ್ದಾರೆ..? : ದಿನೇಶ್ ಗುಂಡೂರಾವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.28- ಬೆಲೆ ಏರಿಕೆ ಎಲ್ಲಿದೆ ಎಂದಿರುವ ಕೇಂದ್ರ ಸಚಿವ ಭಗವಂತ ಕೂಬಾ ಯಾವ ಗ್ರಹದಲ್ಲಿದ್ದಾರೆ, ಜನ ಬೆಲೆ ಏರಿಕೆ ವಿರುದ್ಧ ಬೀದಿಗಿಳಿದಿರುವುದು ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ. ಈ ಕುರಿತು ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಯಿಸಿರುವ ಅವರು, ಬೆಲೆ ಏರಿಕೆ ವಿರುದ್ಧ ಜನರ ಅಸಹನೆ ಆಕ್ರೋಶದ ರೂಪ ಪಡೆಯುತ್ತಿದೆ. ಇಷ್ಟಾದರೂ ಅದಾವ ಭಂಡತನದಿಂದ ಬೆಲೆ ಏರಿಕೆ ಆಗಿಲ್ಲ ಎಂದು ತಾವು ಹೇಳುತ್ತೀರ ಎಂದು ಅವರು ಹೇಳಿದ್ದಾರೆ.

80ರೂ. ಇದ್ದ ಅಡುಗೆ ಎಣ್ಣೆ ಈಗ 180ರೂ. ಆಗಿದೆ. 75ರೂ. ಇದ್ದ ಪೆಟ್ರೋಲ್ ಈಗ 113ರೂ. ಆಗಿದೆ. 80ರೂ. ಇದ್ದ ಡೀಸೆಲ್ 103ರೂ., 500ರೂ. ಇದ್ದ ಸಿಲಿಂಡರ್ ಬೆಲೆ 910ರೂ. ಆಗಿರುವುದು ಬೆಲೆ ಏರಿಕೆ ಅಲ್ಲವೆ ಎಂದು ಅವರು ಪ್ರಶ್ನಿಸಿದ್ದಾರೆ.

ನೀವು ಕೇಂದ್ರ ಸಚಿವರು. ನಿಮಗೆ ಇದು ದುಬಾರಿ ಎನಿಸದಿರಬಹುದು. ಆದರೆ, ಜನಸಾಮಾನ್ಯರ ಪಾಡೇನು? ಅವರೇನು ನಿಮ್ಮಷ್ಟು ಸಿರಿವಂತಿಕೆ ಕುಳಗಳೇ? ಇದನ್ನು ನೀವು ಅರ್ಥ ಮಾಡಿಕೊಳ್ಳದೆ ಈ ರೀತಿಯ ಹೇಳಿಕೆ ನೀಡುವುದು ಎಷ್ಟು ಸಮಂಜಸ ಎಂದು ಅವರು ಹೇಳಿದ್ದಾರೆ.

ತೈಲ ಬೆಲೆ ಪ್ರತಿದಿನ ಏರಿಕೆಯಾಗುತ್ತಲೇ ಇದೆ. ಇನ್ನೂ ಗಗನಮುಖಿಯಾಗುವ ಸಂಭವವಿದೆ. ಇಂತಹ ಸಂದರ್ಭದಲ್ಲಿ ಬೆಲೆ ಇಳಿಕೆ ಬಗ್ಗೆ ಸಮಾಲೋಚನೆ ನಡೆಸಬೇಕಾದ ತಾವು ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ದುರದೃಷ್ಟಕರ. ಜನಸಾಮಾನ್ಯರ ಬದುಕು ದಿನದಿಂದ ದಿನಕ್ಕೆ ದುಸ್ತರವಾಗುತ್ತಿರುವ ಇಂತಹ ಸಂದರ್ಭದಲ್ಲಿ ತಮ್ಮ ಹೇಳಿಕೆ ಜನರನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡುತ್ತದೆ ಎಂದು ಅವರು ಹೇಳಿದ್ದಾರೆ.

Facebook Comments