ವಾದ-ಪ್ರತಿವಾದ ಮುಗಿದಿದೆ, ತೀರ್ಪಿನ ನಿರೀಕ್ಷೆಯಲ್ಲಿದ್ದೇವೆ : ಸಿ.ಪಿ.ಯೋಗೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ, ಜೂ.28- ಬಿಜೆಪಿಯಲ್ಲಿ ನಮ್ಮ ವಾದ-ಪ್ರತಿವಾದ ಮುಗಿದಿದೆ. ನಾವೀಗ ಜಡ್ಜ್‍ಮೆಂಟ್ ನಿರೀಕ್ಷೆಯಲ್ಲಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಮಾರ್ಮಿಕವಾಗಿ ಹೇಳಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮಾರ್ಗಸೂಚಿ ನೀಡಿದಂತೆ ಹೈಕಮಾಂಡ್ ನಾಯಕರು ನಮಗೆ ಮಾರ್ಗಸೂಚಿ ನೀಡುವ ಸಾಧ್ಯತೆ ಇದೆ ಎಂದು ಹೇಳಿದರು.

ನಮ್ಮ ಭಾವನೆಗಳನ್ನು ಹೈಕಮಾಂಡ್ ಮುಂದೆ ಹೇಳಿದ್ದೇವೆ. ಅವರು ಏನು ಆದೇಶ ನೀಡುತ್ತಾರೋ ಅದರ ನಿರೀಕ್ಷೆಯಲ್ಲಿದ್ದೇವೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿಲ್ಲ. ಗೊಂದಲಗಳಿದ್ದರೆ ಅದನ್ನು ಸರಿಪಡಿಸುತ್ತೇವೆ ಎಂದು ಯೋಗೇಶ್ವರ್ ಹೇಳಿದರು.

ಸಿದ್ದರಾಮಯ್ಯ ಇರುವವರೆಗೂ ಡಿ.ಕೆ.ಶಿವಕುಮಾರ್ ಸಿಎಂ ಆಗುವುದಿಲ್ಲ. 70 ವರ್ಷದಿಂದ ದಲಿತ ಸಮುದಾಯ ಕಾಂಗ್ರೆಸ್ ಪರವಾಗಿತ್ತು. ಆದರೆ, ಅವರಿಗೆ ಅನ್ಯಾಯವಾದ ಹಿನ್ನೆಲೆಯಲ್ಲಿ ದಲಿತ ಸಿಎಂ ಆಗಬೇಕೆಂಬ ಕೂಗು ಕೇಳಿಬರುತ್ತಿದ್ದು, ಮುಂದೆ ಇದು ಬಲಿಷ್ಠವಾಗಲಿದೆ ಎಂದರು. ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಮುಂದೆ ಏನಾಗುತ್ತೋ ಕಾದು ನೋಡೋಣ ಎಂದು ಅವರು ಹೇಳಿದರು.

Facebook Comments