ಪ್ರತಿಪಕ್ಷಗಳಿಗೆ ಜನರ ಸಮಸ್ಯೆಗಳು ಚರ್ಚೆಯಾಗುವುದು ಬೇಕಿಲ್ಲ : ಸಚಿವ ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.3- ಪ್ರತಿಪಕ್ಷಗಳಿಗೆ ಜನರ ಸಮಸ್ಯೆಗಳು ಚರ್ಚೆಯಾಗುವುದು ಬೇಕಿಲ್ಲ. ಹಾಗಾಗಿ ಕಾಲಹರಣ ಮಾಡಲು ವಿಧಾನಮಂಡಲ ಅಧಿವೇಶನಕ್ಕೆ ಬರುತ್ತಿರುವಂತೆ ಕಾಣುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹೇಳಿಕೆಯನ್ನೇ ಮುಂದಿಟ್ಟುಕೊಂಡು ವಿಧಾನಸಭೆಯಲ್ಲಿ ಕಾಂಗ್ರೆಸ್ ಕಾಲಹರಣ ಮಾಡುತ್ತಿದೆ. ಪ್ರತಿಪಕ್ಷಗಳಿಗೆ ಅಧಿವೇಶನದಲ್ಲಿ ಒಳ್ಳೆಯ ಚರ್ಚೆ ನಡೆಯುವುದು ಬೇಕಿಲ್ಲ. ಹಾಗಾಗಿ ಈ ರೀತಿಯ ವಿಷಯಗಳನ್ನು ಮುಂದಿಟ್ಟುಕೊಂಡು ಕಾಲ ಕಳೆಯುತ್ತಿವೆ ಎಂದು ಕಿಡಿಕಾರಿದರು.

ದೊರೆಸ್ವಾಮಿ ಅವರು ಹಿರಿಯರು ಎಂಬ ಕಾರಣಕ್ಕಾಗಿ ನಾನು ಅವರನ್ನು ಗೌರವಿಸುತ್ತೇನೆ. ಹಿರಿಯರು ತಮ್ಮ ಹಿರಿಯತನಕ್ಕೆ ತಕ್ಕದಾದ ಮಾತುಗಳನ್ನಾಡಿದರೆ ಗೌರವ ಹೆಚ್ಚಾಗುತ್ತದೆ. ಆದರೆ ಘನತೆ ಮರೆತು ಮಾತನಾಡಿದರೆ ಪ್ರತಿಕ್ರಿಯೆ ಸಹಜವಾಗಿ ಹೊರಬರುತ್ತದೆ ಎಂದು ಹೇಳಿದರು. ದೊರೆಸ್ವಾಮಿ ಅವರಿಗೆ ರಾಜ್ಯ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರ ಸ್ಥಾನಮಾನ ನೀಡಿದೆ. ಹಾಗಾಗಿ ನಾನು ಅದನ್ನು ಗೌರವಿಸುತ್ತೇನೆ.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರೆಲ್ಲರೂ ಸ್ವಾತಂತ್ರ್ಯ ನಂತರ ದೇಶಭಕ್ತರಾಗಿಯೇ ಉಳಿದಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.  ಬಹಳಷ್ಟು ಮಂದಿ ಸ್ವಾತಂತ್ರ್ಯ ನಂತರ ದೇಶ ಭಕ್ತಿಯನ್ನು ಮರೆತು ಸ್ವಾರ್ಥಿಗಳಾಗಿ ಕುಟುಂಬ ರಾಜಕಾರಣಕ್ಕೆ ಜೋತುಬಿದ್ದದ್ದನ್ನು ಕಂಡಿದ್ದೇವೆ. ಹಾಗಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಎಂಬ ಕಾಲ ಘಟ್ಟದಲ್ಲಿ ಹೊಸದಾಗಿ ಮೌಲ್ಯಮಾಪನ ಮಾಡಬೇಕಿದೆ ಎಂದು ಹೇಳಿದರು.

ಆರ್‍ಎಸ್‍ಎಸ್ ಸಂಸ್ಥೆಯನ್ನು ಬ್ರಿಟಿಷ್ ಏಜೆಂಟ್ ಎಂದು ಟೀಕೆ ಮಾಡಲಾಗುತ್ತಿದೆ. ಇದನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ದೇಶ ಭಕ್ತಿಗಾಗಿಯೇ ಹುಟ್ಟಿದ ಆರ್‍ಎಸ್‍ಎಸ್ ದೇಶಕ್ಕಾಗಿಯೇ ಪ್ರಾಣ ಮುಡಿಪಾಗಿಟ್ಟಿದೆ. ಅಂತಹ ಸಂಘಟನೆಗಳ ಬಗ್ಗೆ ಕಾಂಗ್ರೆಸಿಗರು ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ವೀರಸಾವರ್ಕರ್ ಅವರ ಬಗ್ಗೆ ಕೂಡ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Facebook Comments