ಕೋವಿಡ್ ಗೊಂದಲಗಳಿಗೆ ಕೈಪಿಡಿಯಲ್ಲಿ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.10- ಕೋವಿಡ್ ಸೋಂಕಿನ ಕುರಿತಂತೆ ಜನಸಾಮಾನ್ಯರಲ್ಲಿರುವ ಗೊಂದಲಗಳಿಗೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೊರತಂದಿರುವ ಕೈಪಿಡಿ ಉತ್ತರ ಒದಗಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ಖನಿಜಭವನದ ಜೆಎಲ್‍ಆರ್ ಸಭಾಂಗಣದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನಿಮ್ಹಾನ್ಸ್ ಸಹಯೋಗದಲ್ಲಿ ಹೊರತರಲಾದ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಸುಮಾರು 150 ಪ್ರಶ್ನೆಗಳಿಗೆ ಕೈಪಿಡಿಯಲ್ಲಿ ಉತ್ತರ ಒದಗಿಸಲಾಗಿದೆ.

ಬೆಂಗಳೂರಿನಲ್ಲಿ ಚಿಕಿತ್ಸೆಗೆ ಲಭ್ಯವಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಜಿಲ್ಲಾ ಮಟ್ಟದಲ್ಲಿರುವ ಆಸ್ಪತ್ರೆಗಳು, ಜಿಲ್ಲಾ ಮಟ್ಟದ ಕೋವಿಡ್ ಕೇಂದ್ರಗಳ ಸಮಗ್ರ ಮಾಹಿತಿಯನ್ನು ಕೈಪಿಡಿಯಲ್ಲಿ ಮುದ್ರಿಸಲಾಗಿದೆ.

ಮಾಸ್ಕ್ ಧರಿಸುವ ವಿಧಾನ, ಸಾಮಾಜಿಕ ಅಂತರ ಪಾಲನೆ, ಕೈ ತೊಳೆಯುವ ರೀತಿ ಸೇರಿದಂತೆ ಹಲವಾರು ಉಪಯುಕ್ತ ಮಾಹಿತಿಗಳನ್ನು ಕೈಪಿಡಿ ಹೊಂದಿದೆ.  ಜನಸಾಮಾನ್ಯರು ಸೋಂಕಿನ ಬಗ್ಗೆ ಜಾಗೃತಿ ವಹಿಸಿದರೆ ಆತಂಕ ಪಡುವ ಅಗತ್ಯವಿಲ್ಲ. ಇಡೀ ವಿಶ್ವವೇ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪರಿಸ್ಥಿತಿ ಉತ್ತಮವಾಗಿದೆ.

ನಮ್ಮಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಸೋಂಕಿತರು ಗುಣಮುಖರಾಗುತ್ತಿರುವ ಪ್ರಮಾಣವೂ ಹೆಚ್ಚಿದೆ. ಇದಕ್ಕಾಗಿ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗೆ ನಾವು ಧನ್ಯವಾದ ಹೇಳಬೇಕೆಂದು ಅಭಿಪ್ರಾಯಪಟ್ಟರು.

ನಿಮ್ಹಾನ್ಸ್ ನಿರ್ದೇಶಕ ಗಂಗಾಧರ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕಲ್ಪನಾ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಕೆ.ಶ್ರೀನಿವಾಸ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook Comments