ಸಚಿವ ಸ್ಥಾನ ಬಿಡಲು ನಾನು ರೆಡಿ : ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.27- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಒಬ್ಬ ವ್ಯಕ್ತಿ ಒಂದೇ ಹುದ್ದೆ ಎಂಬ ನಿಯಮದಂತೆ ಸಚಿವ ಸ್ಥಾನ ಬಿಡಲು ಸಿದ್ಧ ಎಂದು ಸಿ.ಟಿ.ರವಿ ಘೋಷಿಸಿದ್ದಾರೆ.ಸಂಪುಟ ಪುನಾರಚನೆಯಾಗುವವರೆಗೂ ರವಿ ಅವರು ಸಂಪುಟದಲ್ಲಿ ಮುಂದುವರೆಯಲಿದ್ದು, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.

ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿ.ಟಿ.ರವಿ ಅವರು, ಪಕ್ಷ ಬಯಸಿದರೆ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಪಕ್ಷ ಏನು ಸೂಚಿಸುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ. ಪಕ್ಷದ ಶಿಸ್ತಿನ ಸಿಪಾಯಿ ಎನ್ನುವ ಮೂಲಕ ಸಚಿವ ಸ್ಥಾನ ತೊರೆಯುವುದು ಖಚಿತ ಎಂಬ ಸುಳಿವು ನೀಡಿದರು.

ಪಕ್ಷ ಯಾವಾಗ ಸೂಚಿಸುತ್ತದೆಯೋ ಮರುಗಳಿಗೆಯಲ್ಲೇ ಸಚಿವ ಸ್ಥಾನವನ್ನು ಬಿಡಲು ಸಿದ್ಧನಿದ್ದೇನೆ. ನನಗೆ ಇಷ್ಟು ದೊಡ್ಡ ಮಟ್ಟದ ಹುದ್ದೆ ಸಿಕ್ಕಿರುವುದರಿಂದ ಜವಾಬ್ದಾರಿ ಹೆಚ್ಚಾಗಿದೆ. ಪಕ್ಷ ಸಂಘಟನೆ ನನ್ನ ಮೇಲಿರುವ ಮಹತ್ವದ ಜವಾಬ್ದಾರಿ ಎಂದರು.

ನಾನು ಸಚಿವ ನಾಗುತ್ತೇನೆ ಎಂಬ ನಿರೀಕ್ಷೆಯನ್ನೇ ಇಟ್ಟುಕೊಂಡಿರಲಿಲ್ಲ. ಪಕ್ಷ ನೀಡಿದ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಚುನಾವಣೆಗೆ ನಿಲ್ಲಬೇಕೆಂದು ವರಿಷ್ಠರು ಸೂಚಿಸಿದಾಗ ಮರು ಮಾತನಾಡದೆ ಸ್ರ್ಪಸಿದೆ. ಅದರಂತೆ ಗೆದ್ದು ಬಂದಿದ್ದೇನೆ. ಎಂದಿಗೂ ಕೂಡ ನಾನು ಸಚಿವನಾಗಬೇಕೆಂದು ಲಾಬಿ ಮಾಡಿರಲಿಲ್ಲ. ಪಕ್ಷ ಏನು ಸೂಚಿಸುತ್ತದೆಯೋ ಅದನ್ನಷ್ಟೇ ನಿಭಾಯಿಸಿದ್ದೇನೆ ಎಂದು ಹೇಳಿದರು.

ಈಗಲೂ ಅಷ್ಟೇ, ನನ್ನನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಡಿ ಎಂದು ಕೇಳಿರಲಿಲ್ಲ. ಅನಿರೀಕ್ಷಿತವಾಗಿ ನನ್ನ ಮೇಲೆ ನಂಬಿಕೆ ಇಟ್ಟು ವರಿಷ್ಠರು ಕೊಟ್ಟಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದು ನನ್ನ ಮುಂದಿನ ಗುರಿ ಎಂದರು.

ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿಯೇ ಮುಂದುವರೆಯುತ್ತೇನೆ. ವರಿಷ್ಠರು ಏನು ಬಯಸುತ್ತಾರೋ ಅದರಂತೆ ಕೆಲಸ ಮಾಡಬೇಕು. ಸಚಿವ ಸ್ಥಾನ ನನಗೆ ಶಾಶ್ವತವಲ್ಲ. ಹುದ್ದೆಯೂ ಶಾಶ್ವತವಲ್ಲ. ಈಗಲೂ ನಾನು ಸಾಮಾನ್ಯ ಕಾರ್ಯಕರ್ತ ಎಂದು ಪುನರುಚ್ಚರಿಸಿದರು.

ನಾನು ರಾಷ್ಟ್ರ ರಾಜಕಾರಣಕ್ಕೆ ಹೋದರೂ ಕರ್ನಾಟಕವೇ ನನ್ನ ರಾಜಕೀಯ ಜನ್ಮ ಭೂಮಿ. ದೆಹಲಿಯಲ್ಲಿ ರಾಜಕಾರಣ ಮಾಡದೆ ರಾಜ್ಯದಲ್ಲೇ ಇದ್ದು ಪಕ್ಷವನ್ನು ಸಂಘಟಿಸುತ್ತೇನೆ. ನಾವು ಕೇಂದ್ರದ ಮಾಜಿ ಸಚಿವರಾದ ದಿವಂಗತ ಅನಂತ್‍ಕುಮಾರ್ ಅವರ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ಆದರೂ ಪಕ್ಷ ನೀಡಿರುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಿ ಸಂಘಟನೆಗೆ ಒತ್ತು ಕೊಡುವೆ ಎಂದು ಹೇಳಿದರು.

ಎಪಿಎಂಸಿ ಹಾಗೂ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯಿಂದ ಯಾರಿಗೂ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ದಲ್ಲಾಳಿಗಳ ಕಪಿಮುಷ್ಠಿಯಿಂದ ತಪ್ಪಿಸುವ ಸಲುವಾಗಿ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ.

ಈವರೆಗೂ ರೈತರು ನಿರ್ದಿಷ್ಟ ಎಪಿಎಂಸಿಗಳಲ್ಲಿ ಮಾತ್ರ ಮಾರಾಟ ಮಾಡಬಹುದಿತ್ತು. ಇದೀಗ ಯಾರು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ನನ್ನ ಬೆಳೆ ನನ್ನ ಹಕ್ಕು ಎಂಬ ನೀತಿ ಜಾರಿಯಲ್ಲಿದೆ ಎಂದರು.

ವಿರೋಧ ಪಕ್ಷಗಳು ಅನಗತ್ಯವಾಗಿ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದಲ್ಲಾಳಿಗಳಿಗೆ ಕಡಿವಾಣ ಹಾಕಿದ್ದು ಪ್ರತಿಪಕ್ಷಗಳಿಗೆ ಇಷ್ಟವಾಗಿಲ್ಲ. ಈಗಲೂ ನಾನು ರೈತರು ಮತ್ತು ರೈತ ಸಂಘಟನೆಗಳಲ್ಲಿ ಮನವಿ ಮಾಡಿಕೊಳ್ಳುವುದು ಏನೆಂದರೆ ಯಾವುದೇ ಕಾರಣಕ್ಕೂ ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ.

ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅನಗತ್ಯವಾಗಿ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

Facebook Comments

Sri Raghav

Admin