ಕನ್ನಡಿಗರ ಒಕ್ಕೊರಲ ಬೇಡಿಕೆಯಿಂದ ಶಾಸ್ತ್ರೀಯ ಸ್ಥಾನಮಾನದ ಗೌರವ ಲಭಿಸಿತು : ಸಚಿವ ಸಿ.ಟಿ.ರವಿ
ಚಿಕ್ಕಮಗಳೂರು, ನ.1- ಕನ್ನಡಿಗರ ಒಕ್ಕೊರಲ ಬೇಡಿಕೆಯಿಂದ 2008ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನದ ಗೌರವ ಲಭಿಸಿತು. ಆದರೆ, ನೂರೆಂಟು ವಿಘ್ನಗಳಿಂದಾಗಿ ಅನುಷ್ಠಾನಗೊಳ್ಳಲು ತಡವಾಯಿತು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದರು. ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಡಳಿತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಅವರು ಮಾತನಾಡಿದರು.
ಶಾಸ್ತ್ರೀಯ ಸ್ಥಾನಮಾನಕ್ಕಿದ್ದಂತಹ ನೂರೆಂಟು ವಿಘ್ನಗಳನ್ನು ನಿವಾರಿಸಿಕೊಂಡು ಕನ್ನಡ ಶಾಸ್ತ್ರೀಯ ಸ್ಥಾನಮಾನ ಮೌಲ್ಯ ಎತ್ತಿ ಹಿಡಿಯುವ ಕಾರ್ಯ ಸರ್ಕಾರದಿಂದ ಮಾಡಲಾಗಿದೆ. ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರವನ್ನು ಮೈಸೂರು ವಿವಿಯ 5 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಕಾರ್ಯಾನುಷ್ಠಾನ ಮಾಡಲು ತೀಮಾನಿಸಲಾಗಿದೆ.
ಪ್ರಸ್ತುತ ಮೈಸೂರು ವಿವಿಯ ಒಂದು ಕಟ್ಟಡದಲ್ಲಿ ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರ ಆರಂಭಿಸಲು ಕೇಂದ್ರ ಸರ್ಕಾರದಿಂದ ಬಂದಿರುವ 150 ಕೋಟಿ ರೂ. ಅನುದಾನದ ಸಮರ್ಪಕ ಬಳಕೆಗೆ ಸರ್ಕಾರ ಕಾರ್ಯಾರಂಭ ಮಾಡಿದೆ ಎಂದರು. ಕನ್ನಡ ನಾಡಿನಲ್ಲಿ ಕನ್ನಡದ ಮನಸ್ಸುಗಳು ನಿರ್ಮಾಣವಾಗಬೇಕು. ಕನ್ನಡದ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುವ ಕನ್ನಡ ಸಂಸ್ಕøತಿಯನ್ನು ಅಭಿಮಾನಿಸಿ ಪ್ರೀತಿಸುವ ಮನೋಭಾವ ಬೆಳೆಯಬೇಕು. ಹಳೆಗನ್ನಡದ ಸತ್ವವನ್ನು ನಮ್ಮ ಮಕ್ಕಳಿಗೆ ಆಮೂಲಾಗ್ರವಾಗಿ ಪರಿಚಯಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಮುಂದಾಗಬೇಕು ಎಂದರು.
ತಾಯಿಗಿಂತ ದೇವರಿಲ್ಲ. ತಂದೆಗಿಂತ ಬಂಧುವಿಲ್ಲ ಎಂಬ ನಮ್ಮ ಸಂಸ್ಕøತಿ ಇತ್ತೀಚೆಗೆ ಫಾದರ್ಸ್ ಡೇ, ಮದರ್ಸ್ ಡೇ, ವ್ಯಾಲೆಂಟೈನ್ಸ್ ಡೇಗಳಿಗೆ ಬಲಿಯಾಗದಿರಲಿ ಎಂದ ಅವರು, ಮರ ಸಮೃದ್ಧವಾಗಿರಬೇಕಿದ್ದರೆ ಬೇರು ಗಟ್ಟಿಯಾಗಿರಬೇಕು. ನಮ್ಮ ಸಂಸ್ಕøತಿಯ ಬೇರು ಟಿಸಿಲೊಡೆದಿರುವುದು ನಮ್ಮ ಕನ್ನಡದ ಶಾಲೆಗಳಲ್ಲಿ ಕನ್ನಡ ಶಾಲೆಗಳು ಆತ್ಮವಿಶ್ವಾಸದಿಂದ ತಲೆ ಎತ್ತಿನಿಲ್ಲುವ ವಾತಾವರಣ ನಿರ್ಮಾಣಕ್ಕೆ ಎಲ್ಲಾ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಇದಕ್ಕೆ ಸಾರ್ವಜನಿಕರು ಕೈ ಜೋಡಿಸಲೇ ಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಚಿಕ್ಕಮಗಳೂರು ಕನ್ನಡ ನಾಡಿನಲ್ಲಿ ಅತ್ಯಂತ ವೈಶಿಷ್ಟ್ಯ ಪೂರ್ಣವಾದ ಧಾರ್ಮಿಕ ಕ್ಷೇತ್ರಗಳ ಪ್ರವಾಸಿ ತಾಣಗಳು, ಪ್ರಾಕೃತಿಕ ನೆಲೆಗಳು ನಮ್ಮ ಜಿಲ್ಲೆಯಲ್ಲಿವೆ. ಪ್ರವಾಸೋದ್ಯದ ಅಭಿವೃದ್ಧಿಗೆ ವಿಶೇಷ ಆದ್ಯತೆಯನ್ನು ಸರ್ಕಾರ ನೀಡಿದೆ ಎಂದರು. 2019-20ರಲ್ಲಿ 140 ಕೋಟಿ ರೂ.ಗಳನ್ನು ಪ್ರವಾಸೋದ್ಯಮಕ್ಕೆ ಮೀಸಲಿರಿಸಿದ್ದೇವೆ. ಜಿಲ್ಲೆಯ ಬಹುದಿನದ ಕನಸಾದ ಮೆಡಿಕಲ್ ಕಾಲೇಜಿಗೆ ಅನುಮತಿ ದೊರೆತಿದೆ. 325 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ 170 ಕೋಟಿ ಅನುದಾನದಲ್ಲಿ ಸಾರ್ವಜನಿಕ ಆಸ್ಪತ್ರೆ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಭಾರತದ ಸ್ವಿಡ್ಜರ್ಲ್ಯಾಂಡ್ ಎಂದು ಗುರುತಿಸಿಕೊಳ್ಳುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತಸಾಲಿನ ಮುಳ್ಳನಗಿರಿ ಕರ್ನಾಟಕದಲ್ಲಿ ಅತ್ಯಂತ ಎತ್ತರದ ಪ್ರದೇಶವಾಗಿದೆ. 915ಕ್ಕೂ ಹೆಚ್ಚು ಶಾಸನಗಳು ಇಲ್ಲಿನ ಇತಿಹಾಸ ದಾಖಲಿಸಿವೆ. ರಾಷ್ಟ್ರಕವಿ ಕುವೆಂಪು ನಮ್ಮ ಜಿಲ್ಲೆಯಲ್ಲಿ ಹುಟ್ಟಿದ್ದಾರೆ. ಅಲ್ಲದೆ, ಲಕ್ಷ್ಮೀಶ, ರುದ್ರಭಟ್ಟ, ಶರಣ ಮಾತೆ ಅಕ್ಕನಾಗಮ್ಮ, ಮುಳಿಯ ಚಂದ್ರಯ್ಯ, ಎ.ಆರ್.ಕೃಷ್ಣಶಾಸ್ತ್ರಿ, ಬಿ.ಟಿ.ಲಲಿತಾನಾಯಕ್, ಮಲ್ಲಿಕಾ ಕಡದಾಳ್ ಮೊದಲಾದ ಕವಿ, ಸಾಹಿತಿಗಳಿಂದ ಜಿಲ್ಲೆಯ ಹಿರಿಮೆ ಹೆಚ್ಚಿದೆ ಎಂದರು.
ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಜಿಲ್ಲಾಧಿಕಾರಿ ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.