ರೇಷನ್ ಕಾರ್ಡ್’ಗೆ ಅರ್ಜಿ ಹಾಕಿದವರಿಗೂ ನಾಳೆಯಿಂದ ಪಡಿತರ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.17- ಎಪಿಎಲ್ ಕಾರ್ಡ್ ಹೊಂದಿರುವವರು ಮತ್ತು ಕಾರ್ಡ್‍ಗೆ ಅರ್ಜಿ ಸಲ್ಲಿಸಿರುವವರಿಗೆ ನಾಳೆಯಿಂದಲೇ 10ಕೆಜಿ ಪಡಿತರ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಲ್ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸಿರುವ ಸುಮಾರು 1,19,000 ಅರ್ಜಿದಾರರಿಗೂ ಒಂದು ಕೆಜಿಗೆ 15 ರೂ.ಗಳಂತೆ 10 ಕೆಜಿ ಅಕ್ಕಿ ನಾಳೆಯಿಂದಲೇ ವಿತರಣೆ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಇದಕ್ಕಾಗಿ ಜನರು ಸಲ್ಲಿಸಿರುವ ಸ್ವೀಕೃತಿ ಅರ್ಜಿ ರಶೀದಿಯನ್ನು ತೋರಿಸಬೇಕು. ಇದಲ್ಲದೆ ಅವರು ಮೊಬೈಲ್ ನಂಬರ್‍ಗೆ ಬರುವ ಒಟಿಪಿ ನಂಬರ್ ಆಧಾರದ ಮೇಲೆ ಅಕ್ಕಿ ವಿತರಣೆ ಮಾಡಲಾಗುವುದು. ಈಗಾಗಲೇ ದಾಸ್ತಾನು ಗೋಡೋನ್‍ಗಳಿಂದ ಮಳಿಗೆಗಳಿಗೆ ಸಾಗಾಣೆ ಕಾರ್ಯ ಆರಂಭವಾಗಿದೆ ಎಂದು ಹೇಳಿದ್ದಾರೆ.

ಇದಲ್ಲದೆ ಬಿಪಿಎಲ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿರುವವರಿಗೂ ಕೂಡ ಉಚಿತವಾಗಿ ಅಕ್ಕಿ ವಿತರಣೆ ಕಾರ್ಯ ನಡೆಯಲಿದೆ. ಸುಮಾರು 1,89,000 ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಜತೆಗೂಡಿ ಈ ಯೋಜನೆಯನ್ನು ಸಮರ್ಪಕವಾಗಿ ಹಾಗೂ ಪಾರದರ್ಶಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಏಪ್ರಿಲ್ , ಮೇ ಹಾಗೂ ಜೂನ್ ತಿಂಗಳ ಪಡಿತರವನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ 148 ಕೋಟಿ ರಾಜ್ಯದ ಪಾಲು ಹಾಗೂ 148 ಕೋಟಿ ಕೇಂದ್ರದ ಪಾಲನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಒಟ್ಟಾರೆ ಸುಮಾರು 8,27,000 ಕುಟುಂಬಗಳು ಪಡಿತರ ಪ್ರಯೋಜನ ಪಡೆಯಲಿದ್ದಾರೆ. ಈಗಾಗಲೇ ಆರ್ಥಿಕ ಇಲಾಖೆ ಮತ್ತು ಮುಖ್ಯಮಂತ್ರಿಗಳು ಇದಕ್ಕೆ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಉಜ್ವಲ್ ಯೋಜನೆ ಹಾಗೂ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿಯೂ ಕೂಲ ಮೂರು ತಿಂಗಳ ಎಲ್‍ಪಿಜಿ ಗ್ಯಾಸ್ ಸಿಲಿಂಡರ್‍ಗಳನ್ನು ನೀಡಲು ಈಗಾಗಲೇ ಅನುಮತಿ ದೊರೆತಿದ್ದು, ವಿತರಣೆ ಕಾರ್ಯ ಆರಂಭಗೊಳ್ಳಲಿದೆ ಎಂದರು.

ತೂಕ ಮತ್ತು ಮಾಪನ ಇಲಾಖೆ ಕಾರ್ಯಚರಣೆ ವೇಳೆ ಹೆಚ್ಚಿನ ದರಕ್ಕೆ ಸ್ಯಾನಿಸೈಟರ್ ಮತ್ತು ಮಾಸ್ಕ್‍ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಬಗ್ಗೆಯೂ 5,375 ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ 373 ಪ್ರಕರಣಗಳನ್ನು ದಾಖಲಿಸಲಾಗಿದೆ .

ಸುಮಾರು 13 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದಲ್ಲದೆ ಪಡಿತರ ವಿತರಣಾ ಕೇಂದ್ರಗಳಲ್ಲಿ ಜನರಿಗೆ ನಿಯಮ (ಹಣ ಪಡೆಯುವುದು, ತೂಕದಲ್ಲಿ ವ್ಯತ್ಯಾಸ, ಇತ್ಯಾದಿ) ಮೀರಿ ಕರ್ತವ್ಯ ಲೋಪ ವೆಸಗಿದ 325 ಕೇಂದ್ರಗಳಿಗೆ ನೋಟಿಸ್ ನೀಡಲಾಗಿದೆ. 99 ಕೇಂದ್ರಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಹೇಳಿದ್ದಾರೆ.

Facebook Comments

Sri Raghav

Admin