ಮೋದಿ ಆಡಳಿತದಿಂದ ದೇಶ ಮತ್ತಷ್ಟು ಅಭಿವೃದ್ಧಿ: ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಜೂ.1- ದೇಶದಲ್ಲಿ ಕಠಿಣ ಪರಿಶ್ರಮ, ಪ್ರಾಮಾಣಿಕ ಆಡಳಿತದ ಮೂಲಕ ದೇಶದ ಜನರ ಅತಿಬೆಂಬಲ ಪಡೆದು ಪಾರದರ್ಶಕತೆ, ಭ್ರಷ್ಟಾಚಾರದಿಂದ ಮುಕ್ತವಾದ ಆಡಳಿತವನ್ನು ನರೇಂದ್ರ ಮೋದಿ ಸರ್ಕಾರ ಮಾಡಿದ್ದು ಅವರ ಆಡಳಿತದಿಂದ ದೇಶ ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ನಗರದಲ್ಲಿಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ವರ್ಷದ ಯೋಜನೆ ಸಾಧನೆ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷವ್ಯಾಖ್ಯದಂತೆ ನರೇಂದ್ರ ಮೋದಿ ಅವರು ಸರ್ಕಾರ ಎರಡನೇ ಅವಧಿಗೆ ಕೇಂದ್ರದಲ್ಲಿ ಸ್ಥಾಪಿತಗೊಂಡಿದೆ. ವ್ಯವಸ್ಥೆಗಳಲ್ಲಿ ಸುಧಾರಣೆ, ತಂತ್ರಜ್ಞಾನ ಅಳವಡಿಕೆಯ ಮುಖೇನ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದರು.
ಮೊದಲು ಒನ್ ಕಂಟ್ರಿ – ಒನ್ ಟ್ಯಾಕ್ಸ್, ಒನ್ ಕಂಟ್ರಿ-ಒನ್ ರೇಷನ್ ಎಂಬ ಮಹತ್ವದ ಯೋಜನೆಗಳನ್ನು ಜರಿಗೆ ತಂದಿದ್ದಾರೆ. ಅಲ್ಲದೇ ಒನ್ ಕಂಟ್ರಿ- ಒನ್ ಪಾಸ್ಟಾಗ್ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ಮಾಡಿದ್ದಾರೆ. ಇನ್ನೂ ಒಂದು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ತ್ರಿವಳಿ ತಲಾಖ್, ಸಂವಿಧಾನ 370 ವಿಧಿ ರದ್ದು, ಪೌರತ್ವ ಕಾಯ್ದೆ ತಿದ್ದುಪಡಿ, ಸುಪ್ರೀಂ ಕೊರ್ಟ್ ನಲ್ಲಿ ರಾಮ ಮಂದಿರ ಪರ ತೀರ್ಪು ಬಂದಾಗ ಪರಿಸ್ಥಿತಿ ನಿಭಾಯಿಸಿರುವುದು, ಭಯೋತ್ಪಾದನಾ ವಿರುದ್ಧ ಕಾನೂನಿನ ಕೈಗೆ ಬಲ, ಕಾನೂನುಬಾಹಿರ ಚಟುವಟಿಕೆಗಳ ತಿದ್ದುಪಡಿ ಮಸೂದೆ ಅಂಗೀಕಾರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅಪರಾಧಕ್ಕೆ ಮರಣದಂಡನೆ ಶಿಕ್ಷೆ ನೀಡುವ ಕಾಯ್ದೆಯನ್ನು ಜರಿಗೆ ತಂದು ವಿಕೃತ ಮನಸ್ಸುಗಳಲ್ಲಿ ಕಾನೂನಿನ ಭಯ ಮೂಡಿಸಿದ್ದಾರೆ.
ಅಲ್ಲದೇ ಚಂದ್ರಯಾನ ನಿರೀಕ್ಷಿತ ಯಶಸ್ಸು ಲಭಿಸದಿದ್ದರೂ, ಈ ಸಾಧನೆ ಮಾಡಿದ ಜಗತ್ತಿನ ನಾಲ್ಕು ದೇಶಗಳ ಸಾಲಿಗೆ ಭಾರತ ಸೆರ್ಪಡೆಯಾಗುವಂತೆ ಮಾಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಆರ್ಥಿಕ ಚಟುವಟಿಕೆಗಳಿಗೆ ಪುನರ್ ಚೇತನ ನೀಡುವಂತಹ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್, ಅಮೃತ ದೇಸಾಯಿ, ನಾಗೇಶ ಮುಂತಾದವರು ಇದ್ದರು.