ಮಠ-ಮಂದಿರಗಳಿಗೆ ನೀಡುತ್ತಿರುವ ಪಡಿತರ ನಿಲ್ಲಿಸುವ ಪ್ರಶ್ನೆಯೇ ಇಲ್ಲ : ಸಚಿವ ಗೋಪಾಲಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.13- ಎಷ್ಟೇ ಕಷ್ಟವಾದರೂ ಸರಿ ಮಠ-ಮಂದಿರಗಳಿಗೆ ನೀಡಲಾಗುತ್ತಿರುವ ಪಡಿತರ ಧಾನ್ಯವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯ ನೂತನ ಸಚಿವ ಕೆ.ಗೋಪಾಲಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ತಮ್ಮ ನೂತನ ಕಚೇರಿಯಲ್ಲಿ ಪೂಜೆ ಸಲ್ಲಿಸಿ, ವಿದ್ಯುಕ್ತವಾಗಿ ಪ್ರವೇಶ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಠ-ಮಂದಿರಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನದಾಸೋಹ ನಡೆಯುತ್ತಿದೆ. ಇಲಾಖೆಗೆ ಒಂದಿಷ್ಟು ಆರ್ಥಿಕ ಹೊರೆಯಾದರೂ ಸರಿಯೇ ಮಠ-ಮಂದಿರಗಳಿಗೆ ನೀಡುತ್ತಿರುವ ಪಡಿತರ ಧಾನ್ಯವನ್ನು ಮುಂದುವರೆಸುವುದಾಗಿ ಸಚಿವರು ಹೇಳಿದರು.

ಕೆಲವು ತಾಂತ್ರಿಕ ಕಾರಣಗಳಿಂದ ಹಿಂದೆ ಪಡಿತರ ವಿತರಣೆ ಸ್ಥಗಿತಗೊಂಡಿತ್ತು. ಸರ್ಕಾರ ನೀಡದಿದ್ದ ಸಂದರ್ಭದಲ್ಲೂ ಮಠಾಧೀಶರು ವಿದ್ಯಾರ್ಥಿಗಳಿಗೆ ಅನ್ನದಾಸೋಹವನ್ನು ಉಣಬಡಿಸಿದ್ದಾರೆ. ಅವರ ಸೇವೆಗೆ ನಾನು ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ನನಗೆ ಇದು ಹೊಸ ಖಾತೆಯಾಗಿದೆ. ಯಾವುದೇ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಬೇಕಾದರೆ ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಿಯೇ ಮುಂದುವರೆಯುತ್ತೇನೆ. ಇಲಾಖೆಯನ್ನು ಸುಧಾರಣೆ ಮಾಡುವುದು ನನ್ನ ಮೊದಲ ಕರ್ತವ್ಯ ಎಂದರು.ಫಲಾನುಭವಿಗಳಿಗೆ ಗುಣಮಟ್ಟದ ಪಡಿತರ ಸಿಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ತಿಂಗಳ ಮೊದಲ ವಾರದಲ್ಲೇ ಆಹಾರ ಧಾನ್ಯಗಳನ್ನು ವಿತರಣೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಇಲಾಖೆ ಬಗ್ಗೆ ಇಂಚಿಂಚೂ ಮಾಹಿತಿಯನ್ನು ಪಡೆಯುತ್ತೇನೆ. ಇದೊಂದು ಸವಾಲಿನ ಕೆಲಸವಾಗಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಗೋಪಾಲಯ್ಯ ಅವರು ಶಪಥ ಮಾಡಿದರು. ಸಾರ್ವಜನಿಕರಿಗೆ ಇಲಾಖೆಯ ಮೂಲಕ ನ್ಯಾಯ ಒದಗಿಸುವುದು ನನ್ನ ಉದ್ದೇಶವಾಗಿದೆ. ಇದಕ್ಕಾಗಿ ನನ್ನದೇ ಆದ ಕೆಲವು ವಿನೂತನವಾದ ಯೋಜನೆಗಳನ್ನು ಜಾರಿ ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ ಎಂದರು.

ನನಗೆ ಸಣ್ಣ ಕೈಗಾರಿಕೆ ಖಾತೆ ನೀಡಿದಾಗ ಯಾವುದೇ ರೀತಿಯ ಅಸಮಾಧಾನ ಇರಲಿಲ್ಲ. ನನ್ನ ಕ್ಷೇತ್ರದಲ್ಲೇ ಸಾಕಷ್ಟು ಸಣ್ಣ ಕೈಗಾರಿಕೆಗಳಿವೆ. ಆದರೂ ಮುಖ್ಯಮಂತ್ರಿಯವರು ಈ ಖಾತೆಯನ್ನು ನೀಡಿರುವುದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದು ತಿಳಿಸಿದರು. ರಾಜ್ಯಾದ್ಯಂತ ಪ್ರವಾಸ ಮಾಡಿ ಅಧಿಕಾರಿಗಳ ಸಭೆ ಕರೆದು ಎಲ್ಲೆಲ್ಲಿ ಲೋಪ ದೋಷಗಳಿವೆಯೋ ಅವುಗಳನ್ನು ಸರಿಪಡಿಸುತ್ತೇನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನ್ನ ಮೇಲೆ ನಂಬಿಕೆ ಇಟ್ಟು ಖಾತೆ ನೀಡಿದ್ದಾರೆ. ಅವರ ವಿಶ್ವಾಸ ಉಳಿಸಿಕೊಂಡು ಇಲಾಖೆಯನ್ನು ನಿಭಾಯಿಸುವುದಾಗಿ ತಿಳಿಸಿದರು.

ಖಾತೆ ಹಂಚಿಕೆ ಕುರಿತಂತೆ ನಮ್ಮಲ್ಲಿ ಅಸಮಾಧಾನವಿಲ್ಲ. ಎಲ್ಲ ಸಚಿವರು ಕೊಟ್ಟಿರುವ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಅವರ ವಿಶ್ವಾಸ ಉಳಿಸಿಕೊಳ್ಳುವುದು ನಮ್ಮ ಮುಂದಿನ ಸವಾಲು ಎಂದರು.

ಇದಕ್ಕೂ ಮುನ್ನ ಗೋಪಾಲಯ್ಯನವರು ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಪ್ರವೇಶ ಮಾಡಿದರು. ಬಿಬಿಎಂಪಿ ಮಾಜಿ ಉಪ ಮೇಯರ್ ಹೇಮಲತಾ ಗೋಪಾಲಯ್ಯ, ಅಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಅನೇಕ ಗಣ್ಯರು ಇದೇ ವೇಳೆ ಹೂ ಗುಚ್ಚ ನೀಡಿ ಸಚಿವರಿಗೆ ಶುಭ ಕೋರಿದರು.

Facebook Comments

Sri Raghav

Admin