ಲಸಿಕೆ ಪಡೆದು ಕೊರೊನಾ ಮುಕ್ತ ರಾಜ್ಯ ನಿರ್ಮಾಣ ಮಾಡೋಣ: ಸಚಿವ ಗೋಪಾಲಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.18- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ನೀಡುತ್ತಿರುವ ಕೋವಿಶೀಲ್ಡ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಬಗ್ಗೆ ಸಾರ್ವಜನಿಕರು ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ. ರಾಜಾಜಿನಗರದ ಪಶ್ಚಿಮ ಕಾರ್ಡ್ ರಸ್ತೆಯ ನಾರಾಯಣ ನೇತ್ರಾಲಯದಲ್ಲಿಂದು ಲಸಿಕೆ ನೀಡಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊರೊನಾ ಮಹಾಮಾರಿ ದೇಶದೆಲ್ಲೆಡೆ ಹರಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ವಿಜ್ಞಾನಿಗಳು ಶ್ರಮಪಟ್ಟು ಲಸಿಕೆಯನ್ನು ತಯಾರಿಸಿದ್ದಾರೆ. ಈಗಾಗಲೇ ಎರಡು ದಿನಗಳಿಂದ ರಾಜ್ಯದೆಲ್ಲೆಡೆ ಕೊರೊನಾ ವಾರಿಯರ್ಸ್‍ಗಳಿಗೆ ಲಸಿಕೆ ನೀಡಲಾಗುತ್ತಿದೆ. ಯಾವುದೇ ದುಷ್ಪರಿಣಾಮ ಬೀರುತ್ತಿಲ್ಲ ಎಂಬ ಮಾಹಿತಿ ಸಿಕ್ಕಿದೆ. ವದಂತಿಗಳಿಗೆ ಕಿವಿಗೊಡದೆ ಜನರು ಸರ್ಕಾರಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಕೊರೊನಾ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ನನ್ನ ಕ್ಷೇತ್ರದಲ್ಲೂ ಕೂಡ ಈ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ನಾನು ಕೂಡ ಇದರ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ಕೂಡ ಪಡೆಯುತ್ತಿದ್ದೇನೆ. ಜನರು ಆತಂಕಬೇಡ ಎಂದರು. ಈ ಸಂದರ್ಭದಲ್ಲಿ ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ.ಭುಜಂಗ ಶೆಟ್ಟಿ ಸಿಬ್ಬಂದಿಗಳ ಪರವಾಗಿ ಮೊದಲು ಲಸಿಕೆ ಹಾಕಿಸಿಕೊಂಡು ಮಾದರಿಯಾದರು.

ನಂತರ ಮಾತನಾಡಿದ ಅವರು, ಈ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ, ಆದರೆ ಯಾವುದಕ್ಕೂ ಸಾಮಾಜಿಕ ಅಂತರ ಹಾಗೂ ಮಾಸ್ಕ ಮತ್ತು ಸ್ಯಾನಿಟೈಸ್ ಇವುಗಳನ್ನು ತಪ್ಪದೆ ಬಳಸಬೇಕು ಯಾರು ಮೈ ಮರೆಯಬಾರದು ಎಂದು ಹೇಳಿದರು.

ಈ ಲಸಿಕೆ ಉತ್ತಮವಾಗಿದ್ದು, ವಿಶ್ವದ ಎಲ್ಲಾ ರಾಷ್ಟ್ರಗಳು ಬೇಡಿಕೆ ಸಲ್ಲಿಸಿದ್ದು, ನಮ್ಮ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಬೇಕು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡದೇ ಎಲ್ಲರೂ ಕೈ ಜೋಡಿಸಿ ಕರೊ ನ ಮುಕ್ತ ಭಾರತ ಹಾಗೂ ಕರ್ನಾಟಕ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಹಿತ್ ಶೆಟ್ಟಿ, ಬಿಬಿಎಂಪಿ ಆರೋಗ್ಯ ಅಧಿಕಾರಿ ಮಂಜುಳಾ, ಸಚಿವರ ಆಪ್ತ ಕಾರ್ಯದರ್ಶಿ ಕಾಂತರಾಜï, ಮಂಜುನಾಥ್ ಪ್ರಸಾದ್, ವೆಂಕಟೇಶ್ ಮೂರ್ತಿ, ವೆಂಕಟೇಶ್ ಸೇರಿದಂತೆ ಹಾಗೂ ಆಸ್ಪತ್ರೆಯ ಮುಖ್ಯಸ್ಥರು ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Facebook Comments