ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ಬಡವರಿಗೆ 43 ಸಾವಿರ ಮನೆ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.9- ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ 43 ಸಾವಿರ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸದ್ಯದಲ್ಲೇ 25ರಿಂದ 30 ಸಾವಿರ ಮನೆಗಳನ್ನು ಬಡವರಿಗೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ವಸತಿ ಇಲಾಖೆ ವ್ಯಾಪ್ತಿಯ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಗೆ ಸಂಬಂಧಿಸಿದಂತೆ ನಿಗಮಕ್ಕೆ ಸರ್ಕಾರಿ ಜಮೀನು ಮಂಜೂರಾತಿ ಮತ್ತು ಜಮೀನು ಹಸ್ತಾಂತರ ಕುರಿತಂತೆ ಸಂಬಂಧಪಟ್ಟ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈಗಾಗಲೇ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಗೆ ಸಂಬಂಧಿಸಿದಂತೆ 43 ಸಾವಿರ ಮನೆ ಪ್ರಾರಂಭ ಮಾಡಿದ್ದೇವೆ. 331 ಎಕ್ಕರೆ ಜÁಗವೂ ಸಿಕ್ಕಿದೆ ಅದರಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. 229 ಎಕರೆ ಜಗ ಮಂಜೂರಾಗಿದೆ ಒಟ್ಟು 900 ಎಕರೆ ಜಗ ಸಿಗುತ್ತದೆ ಎಂದರು.

ಇದರಿಂದ ಒಂದು ಲಕ್ಷ ಮನೆ ನಿರ್ಮಾಣ ಮಾಡುವುದಕ್ಕೆ ಅನುಕೂಲ ಆಗುತ್ತದೆ. ಬಡವರಿಗೆ, ಗುಡಿಸಲಿನಲ್ಲಿ ವಾಸಿಸುವರಿಗೆ ಮನೆ ಸಿಗುವಂತೆ ಆಗಬೇಕು. ಕಂದಾಯ ಇಲಾಖೆ ಸಚಿವರ ಜೊತೆ ಈ ಬಗ್ಗೆ ಮಾತುಕತೆ ಮಾಡುತ್ತಿದ್ದೇವೆ. 25 ಸಾವಿರ ಮನೆಗಳನ್ನು 2021ರ ಜೂನ್ ವೇಳೆಗೆ ಕೊಡುತ್ತೇವೆ ಎಂದು ತಿಳಿಸಿದರು.

ದುಡ್ಡು ಗಿಡದಿಂದ ಉದುರುವುದಿಲ್ಲ, ಇಚ್ಛಾಶಕ್ತಿ ಇರಬೇಕು ಜೂನ್ 2021ರ ಒಳಗೆ ಈ ವಸತಿ ಇಲಾಖೆಯ ಕೆಲಸ ಪೂರ್ಣಗೊಳ್ಳದಿದ್ದರೆ ಮಂತ್ರಿಗಿರಿಯಲ್ಲಿ ಇರುವುದಿಲ್ಲ. ಅಧಿಕಾರಿಗಳು ಮಾಡದಿದ್ದರೆ ಇದರ ಹೊಣೆ ನಾನೇ ಹೊರುತ್ತೇನೆ ಎಂದು ಹೇಳಿದರು.  ನನಗೆ ಸಂಜನಾನೂ ಗೊತ್ತಿಲ್ಲ, ರಾಗಿಣಿನೂ ಗೊತ್ತಿಲ್ಲ, ನನಗೆ ಗೊತ್ತಿರುವುದು ನಮ್ಮ ಶ್ರೀಮತಿ ಮಾತ್ರ ಎಂದು ಡ್ರಗ್ಸ್ ವಿಚಾರಕ್ಕೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಕಾನೂನಿಗಿಂತ ಯಾರೂ ದೊಡ್ಡವರಲ್ಲ ನಾನು ಒಂದು ಸಿನಿಮಾ ನೋಡಿ 25 ವರ್ಷವಾಯ್ತು. ಉಮಾ ಟಾಕೀಸ್‍ನಲ್ಲಿ ಬಂಧನ ಸಿನಿಮಾವನ್ನು ನಾನು, ನನ್ನ ಪತ್ನಿ ನೋಡಿದ್ದೆವು ಎಂದರು.
ಡ್ರಗ್ಸ್ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಯಾವುದೇ ರಾಜಕಾರಣಿ ಮಕ್ಕಳು ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗಲಿ. ಯಾರು ಎಷ್ಟೇ ದೊಡ್ಡವರಾದರೂ ಅವರ ಮೇಲೆ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.

Facebook Comments