ಲಸಿಕೆ ಪಡೆದು 3ನೇ ಅಲೆ ತಪ್ಪಿಸಿ : ಸಚಿವ ಸುಧಾಕರ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.16- ಕೋವಿಡ್ ಲಸಿಕೆ ಪಡೆದರೆ ನಮಗೆ ಕೊರೊನಾ ಬರುವುದಿಲ್ಲ ಎಂಬ ಉದಾಸೀನತೆ ಬೇಡ. ಲಸಿಕೆ ಪಡೆಯುವುದರಿಂದ ಮುಂದೆ ಸೋಂಕು ತಗುಲುವುದನ್ನು ತಡೆಯಬಹುದು. ಇಲ್ಲದಿದ್ದರೆ ರಾಜ್ಯದಲ್ಲಿ 3ನೇ ಅಲೆ ಬರಬಹುದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಹಾಕಿಸಿಕೊಂಡ ಮೇಲೆ ಕೊರೊನಾ ಬರುವುದಿಲ್ಲ ಎಂದು 100ಕ್ಕೆ ನೂರರಷ್ಟು ಖಚಿತತೆಯಿಂದ ಹೇಳಲು ಸಾಧ್ಯವಿಲ್ಲ.

ಆಗುವ ಅನಾಹುತ ಮತ್ತು ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಲಸಿಕೆ ಪಡೆಯುವುದರಿಂದ ಮುಂದೆ ಬರಬಹುದಾದ ಮೂರನೇ ಅಲೆಯನ್ನು ತಪ್ಪಿಸಿಕೊಳ್ಳಬಹುದು. ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ 3ನೇ ಅಲೆ ಕಾಣಿಸಿಕೊಂಡಿದೆ. ಲಸಿಕೆ ಹಾಕಿಸಿಕೊಳ್ಳುದರಿಂದ 3ನೇ ಅಲೆಯನ್ನು ತಡೆಯಬಹುದು ಎಂದರು.

ಮೂರ್ನಾಲ್ಕು, ಫೈವ್ ಸ್ಟಾರ್ ಹೋಟಲ್‍ಗಳನ್ನು ತಾತ್ಕಾಲಿಕ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನಾಗಿ ಮಾಡಲಾಗುವುದು. ಇದಕ್ಕಾಗಿ ಕನಿಷ್ಠ 10 ಹೋಟೆಲ್‍ಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಅಲ್ಲಿ ಚಿಕಿತ್ಸೆ ನೀಡಲಾಗುವುದು. ಸಣ್ಣ ಸ್ವರೂಪದ ಲಕ್ಷಣ ಇದ್ದವರಿಗೆ ಇಂತಹ ಹೋಟೆಲ್‍ಗಳಲ್ಲೇ ಚಿಕಿತ್ಸೆ ನೀಡಲಾಗುವುದು. ಎಲ್ಲರಿಗೂ ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇರುವುದಿಲ್ಲ. ಹೋಟೆಲ್‍ಗಳಲ್ಲಿ 3 ಸಾವಿರ ಹಾಸಿಗೆಗಳನ್ನು ಕೋವಿಡ್‍ಗಾಗಿ ವ್ಯವಸ್ಥೆ ಮಾಡಲಾಗುವುದು. ತೀವ್ರ ಸ್ವರೂಪದ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ ಎಂದು ಹೇಳಿದರು.

ದೊಡ್ಡ ಆಸ್ಪತ್ರೆಗಳಲ್ಲಿ ಐಎಎಸ್, ಐಪಿಎಸ್, ಬಿಡಬ್ಲ್ಯು ಎಸ್‍ಎಸ್, ಬೆಸ್ಕಾಂ, ಸುವರ್ಣ ಟ್ರಸ್ಟ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಿದ್ದು, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದಾರೆ ಎಂದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ಸಾವಿರ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಒಂದು ಸಾವಿರ ಹಾಸಿಗೆಗಳನ್ನು ಕೋವಿಡ್‍ಗೆ ಮೀಸಲಿಡಲಾಗುವುದು. ಖಾಸಗಿ ವೈದ್ಯಕೀಯ ಆಸ್ಪತ್ರೆಗಳಲ್ಲಿ 5 ಸಾವಿರ ಹಾಸಿಗೆಗಳನ್ನು ನೀಡಬೇಕು. ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು ಎಂದು ಹೇಳಿದರು.

49 ಆ್ಯಂಬುಲೆನ್ಸ್‍ಗಳನ್ನು ಕೋವಿಡ್‍ನಿಂದ ಮೃತಪಟ್ಟವರಿಗಾಗಿ ಒದಗಿಸಲಾಗಿದ್ದು, ಉಚಿತವಾಗಿ ಶ್ರದ್ದಾಂಜಲಿ ಆ್ಯಂಬುಲೆನ್ಸ್ ಸೇವೆ ದೊರೆಯಲಿದೆ. ಶವ ಸಂಸ್ಕಾರಕ್ಕೆ ಹಣ ಕಟ್ಟುವಂತಿಲ್ಲ. ರೆಮ್‍ಡಿಸಿವಿರ್ ಸೇರಿದಂತೆ ಔಷಧಿ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಆಮ್ಲಜನಕದ ಘಟಕ ಸ್ಥಾಪನೆ ಮಾಡಲಾಗುವುದು. ಪದೇ ಪದೇ ಆಕ್ಸಿಜನ್ ಸಿಲಿಂಡರ್‍ಗಳ ಬದಲಾವಣೆ ತಪ್ಪಿಸಲು ಜಂಬೋ ಸಿಲಿಂಡರ್ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲು ಟೆಂಡರ್ ಕರೆಯಲಾಗಿದೆ ಎಂದರು.

ಐದು ಸಾವಿರ ಆಕ್ಸಿಜನ್ ಸಿಲಿಂಡರ್ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮುಂಚೂಣಿಯಲ್ಲಿ ನೌಕರರಾದ ವೈದ್ಯರು, ನರ್ಸ್‍ಗಳನ್ನು 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. ಇತರೆ ಇಲಾಖೆ ಸಹಕಾರದೊಂದಿಗೆ ಸೋಂಕು ಪರೀಕ್ಷೆ ಮತ್ತು ಟ್ರೇಸಿಂಗ್ ಮಾಡಲಾಗುವುದು. ಏನು ಲಕ್ಷಣಗಳಿಲ್ಲದವರನ್ನು ಆಸ್ಪತ್ರೆಗೆ ಸೇರಿಸಿಕೊಂಡರೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ಎಲ್ಲಾ ಆಸ್ಪತ್ರೆಗಳಲ್ಲಿ ಯಾರಿಗೆ ರೋಗದ ಲಕ್ಷಣ ಇದೆ ಅಂಥವರನ್ನು ಮಾತ್ರ ದಾಖಲು ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಮುಖ್ಯವಾಗಿ ಟ್ರೆಸಿಂಗ್ ಮಾಡಬೇಕು, ರೋಗದ ಲಕ್ಷಣ ಇದ್ದರೆ ಶೀಘ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು, ಪರೀಕ್ಷೆ ಮಾಡಿಸಿಕೊಂಡ 23 ಗಂಟೆ ಒಳಗೆ ವರದಿ ಸಿಗುವಂತೆ ಮಾಡಲಾಗುವುದು. ರೋಗ ಹೆಚ್ಚಿರುವ ಕಡೆಗಳಲ್ಲಿ ಮೈಕ್ರೋ ಕಂಟೈನ್ಮೆಂಟ್ ಜೋನ್‍ಗಳನ್ನ ಮಾಡಲು ಕೂಡ ತೀರ್ಮಾನಿಸಲಾಗಿದೆ ಎಂದು ಸುಧಾಕರ್ ತಿಳಿಸಿದರು.

# ಅನಗತ್ಯ ಗುಂಪು ನಿಷೇಧ:
ಅನಗತ್ಯವಾಗಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಒಳಾಂಗಣದಲ್ಲಿ ನಡೆಯುವ ಮದುವೆ, ಸಮಾರಂಭಗಳಲ್ಲಿ 100 ಜನಕ್ಕಿಂತ ಹೆಚ್ಚು ಸೇರುವಂತಿಲ್ಲ, ಹೊರಾಂಗಣದಲ್ಲಿ 200 ಜನಕ್ಕೆ ಸೀಮಿತಗೊಳಿಸಲಾಗಿದೆ. ಕಂಟೈನ್ಮೆಂಟ್ ಜೋನ್‍ಗಳನ್ನು ಹೆಚ್ಚಳ ಮಾಡಲಾಗುವುದು. ಸೋಂಕು ಇರುವವರಿಗೆ ಮುದ್ರೆ ಹಾಕಲಾಗುವುದು.

ಸಹಾಯವಾಣಿಗೆ ಪ್ಯಾರಮೆಡಿಕಲ್ ಶಿಕ್ಷಣವುಳ್ಳವರನ್ನು ನೇಮಕ ಮಾಡಲಾಗುವುದು. ಸೋಂಕಿತ ಶೇ.95ರಷ್ಟು ಜನರಿಗೆ ಆಸ್ಪತ್ರೆಯ ಚಿಕಿತ್ಸೆ ಅಗತ್ಯವಿರುವುದಿಲ್ಲ. ಶೇ.5ರಷ್ಟು ಮಂದಿಗೆ ಮಾತ್ರ ಅಗತ್ಯವಿರುತ್ತದೆ. ಪಾಸಿಟಿವ್ ಬಂದಿದೆ ಎಂದು ಆತಂಕಕ್ಕೊಳಗಾಗಬಾರದು. ಜನರ ಅಮೂಲ್ಯಜೀವ ಉಳಿಸಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

# ಶಾಸಕರ ಸಭೆ:
ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾನುವಾರ ಬೆಂಗಳೂರಿನ ಶಾಸಕರ ಹಾಗೂ ಸಚಿವರ ಸಭೆ ನಡೆಸಲಾಗುವುದು. ಅಂದೇ ವಿರೋಧ ಪಕ್ಷಗಳ ಸಭೆಯನ್ನು ಮುಖ್ಯಮಂತ್ರಿಗಳು ನಡೆಸಲಿದ್ದು, ತಾಂತ್ರಿಕ ಸಲಹಾ ಸಮಿತಿ ನೀಡಿರುವ ಸಲಹೆಗಳನ್ನು ಆಧರಿಸಿ ಚರ್ಚಿಸಲಾಗುವುದು. ಎಲ್ಲಾ ರಾಜ್ಯಗಳ ಮಾರ್ಗಸೂಚಿಯನ್ನು ಗಮನಿಸಲಾಗಿದೆ.

ರಾಜ್ಯದಲ್ಲಿ ಕೆಲವು ಜಿಲ್ಲಾ ಕೇಂದ್ರಗಳಲ್ಲಿ ರಾತ್ರಿ ಕಫ್ರ್ಯೂ ಕೂಡ ಜಾರಿಯಲ್ಲಿದೆ. ರೋಗ ನಿಯಂತ್ರಣಕ್ಕಾಗಿ ಗಂಭೀರ ಹಾಗೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸ್ವಯಂ ನಿಗ್ರಹಕ್ಕೆ ಒಳಗಾಗಿ ಜನತಾ ಕಫ್ರ್ಯೂವನ್ನು ವಿಧಿಸಿಕೊಂಡರೆ 2ನೇ ಅಲೆಯನ್ನುಎಲ್ಲರೂ ಗೆಲ್ಲುತ್ತೇವೆ. ಎಲ್ಲರೂ ಕೂಡಲೇ ಲಸಿಕೆ ಪಡೆಯಬೇಕು ಎಂದು ಅವರು ಮನವಿ ಮಾಡಿದರು.

Facebook Comments