ವಿದೇಶಗಳಿಂದ ಕನ್ನಡಿಗರ ಆಗಮನ, ಸಿದ್ಧತೆಗಳ ಬಗ್ಗೆ ಪರಿಶೀಲಿಸಿದ ಸಚಿವರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ವಿದೇಶದಲ್ಲಿರುವ ಕನ್ನಡಿಗರು ಹನ್ನೊಂದನೇ ತಾರೀಕಿನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರುಗಳು ಗುರುವಾರ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ವಿಮಾನ ನಿಲ್ದಾಣ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಗತ್ಯ ಸೂಚನೆ ಮತ್ತು ಮಾರ್ಗದರ್ಶನವನ್ನು ನೀಡಿದರು ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಒಟ್ಟು 6,500ಕ್ಕೂ ಅಧಿಕ ಪ್ರಯಾಣಿಕರು ಆಗಮಿಸುವ ನಿರೀಕ್ಷೆ ಇದ್ದು, ಅವರೆಲ್ಲರನ್ನು ತಪಾಸಣೆ ನಡೆಸಿ ಎರಡು ಹಂತದ ಪರೀಕ್ಷೆಗೆ ಒಳಪಡಿಸಲಾಗುವುದು. ಅವರಿಗೆ ಯಾವುದೇ ಸೊಂಕು ಇಲ್ಲ ಎಂಬುದು ದೃಢಪಟ್ಟ ನಂತರವಷ್ಟೇ ಮನೆಗೆ ಕಳುಹಿಸಲಾಗುವುದು ಎಂದು ಸಚಿವ ಸುಧಾಕರ್ ಅವರು ತಿಳಿಸಿದರು.

ಒಟ್ಟು ಹದಿನಾಲ್ಕು ದಿನಗಳ ಕಾಲ ಎಲ್ಲ ಪ್ರಯಾಣಿಕರನ್ನು ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿ ಇರಿಸಲಾಗುವುದು. ಅದಕ್ಕಾಗಿ ಹೋಟೆಲ್ ಗಳು, ಶಾಲಾ ಕಾಲೇಜು, ಹಾಸ್ಟೆಲ್ ಮತ್ತಿತರ ಕಡೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಇವರನ್ನು ಕ್ವಾರಂಟೈನ್ ನಲ್ಲಿ ಇರಿಸುವುದರಿಂದ ಸಾರ್ವಜನಿಕರಿಗಾಗಲಿ ಅಕ್ಕಪಕ್ಕದವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಈ ಬಗ್ಗೆ ಯಾರಿಗೂ ಆತಂಕವಾಗಲೀ ಭಯವಾಗಲಿ ಬೇಡ ಎಂದು ಸಚಿವರು ಮಾಹಿತಿ ನೀಡಿದರು.

ಮಧ್ಯಾಹ್ನ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಕೈಗೊಳ್ಳಬೇಕಾಗಿರುವ ಅಗತ್ಯ ಕ್ರಮಗಳು, ಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಕುರಿತು ಅಗತ್ಯ ಸೂಚನೆಗಳನ್ನು ನೀಡಿದ್ದು, ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ.

ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಇಲಾಖೆಯ ಸಿಬ್ಬಂದಿಗಳು ಪ್ರಯಾಣಿಕರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ವಿಮಾನ ನಿಲ್ದಾಣದ ಪರಿಶೀಲನೆ ವೇಳೆ ಗ್ರಾಮಾಂತರ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಸಚಿವರಿಗೆ ಮಾಹಿತಿ ನೀಡಿದರು.

Facebook Comments

Sri Raghav

Admin