“ಒಂದೇ ಸ್ಥಳದಲ್ಲಿ ನೆಲೆಯೂರಿರುವ ಅಧಿಕಾರಿಗಳ ವರ್ಗಾವಣೆ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17- ಸಮಾಜ ಕಲ್ಯಾಣ ಇಲಾಖೆಯಲ್ಲಿ ಇನ್ನು ಮುಂದೆ ಅಗತ್ಯ ವಸ್ತಗಳನ್ನಷ್ಟೆ ಖರೀದಿಸಲು ಅನುಮತಿ ನೀಡಲಾಗುವುದು, ಗುತ್ತಿಗೆದಾರರ ಅನುಕೂಲಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯ ಇರುವ ಸರಕುಗಳನ್ನು ಖರೀದಿಸಿ ಹಣ ಅಪವ್ಯವಯವಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟಾಶ್ರೀನಿವಾಸ ಪೂಜಾರಿ ಹೇಳಿದರು.

ವಿಧಾನ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‍ನ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಲ್ಲಾಜಿಲ್ಲದೆ ಕ್ರಮ ಕೈಗೊಳ್ಳಲಾಗಿದೆ. ಭ್ರಷ್ಟಾಚಾರ, ಅವ್ಯವಹಾರ ಸೇರಿದಂತೆ ದೂರು ಬಂದಿರುವ ಹಾಗೂ ಬಹಳ ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ನೆಲೆಯೂರಿರುವ ಅಧಿಕಾರಿಗಳನ್ನು ಗುರುತಿಸಿ ವರ್ಗಾವಣೆ ಮಾಡುವುದು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಇಲಾಖೆಯಲ್ಲಿ ಗಮನಾರ್ಹವಾದ ಬದಲಾವಣೆ ಕಾಣುವಂತೆ ಮಾಡಲಾಗುವುದು ಎಂದು ಹೇಳಿದರು.

ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಅಗತ್ಯವಾದ ವಸ್ತುಗಳನ್ನು ಖರೀದಿ ಮಾಡಲು ಟೆಂಡರ್ ಕರೆದರೆ ಅಗತ್ಯ ವಸ್ತುಗಳನ್ನು ಬಿಟ್ಟು ಮಾರುಕಟ್ಟೆಯಲ್ಲಿ ಲಭ್ಯ ಇರುವ ವಸ್ತುಗಳನ್ನು ಖರೀದಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೂ ಲಾಭವಿಲ್ಲ, ಇಲಾಖೆಗೂ ನಷ್ಟ ಎಂದು ಹೇಳಿದರು. ಇನ್ನೂ ಮುಂದೆ ಇಂತಹದ್ದಕ್ಕೆ ಅವಕಾಶ ಇಲ್ಲ. ತುಮಕೂರು ಜಿಲ್ಲೆಯಲ್ಲಿ ಹಲವು ಯೋಜನೆಗಳಲ್ಲಿ ಭ್ರಷ್ಟಚಾರ ನಡೆದಿರುವ ಆರೋಪಗಳಿವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿ ಭ್ರಷ್ಟಚಾರ ನಡೆಸಿದ ಅಧಿಕಾರಿಗಳು ಈ ಹಿಂದೆ ಕೆಲಸ ಮಾಡಿದ ಜಾಗದಲ್ಲೂ ಲೋಪ ಮಾಡಿದ ದೂರುಗಳಿದ್ದವು ಎಂದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ 22 ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಅವರ ವಿರುದ್ಧ ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಪಪ್ರಶ್ನೆ ಕೇಳಿದ ಬಿ.ಕೆ.ಹರಿಪ್ರಸಾದ್, ಹಿರಿಯ ಹೇಳಿಕೆಯ ಪ್ರಕಾರ ಪ್ರಜಾಪ್ರಭುತ್ವ ಇರುವವರೆಗೂ ಭ್ರಷ್ಟಾಚಾರ ಇದ್ದೆ ಇರುತ್ತದೆ. ಆದರೆ ಶೋಷಿತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರುವ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯಬಾರದು. ಸತ್ಯ ಹರಿಶ್ಚಂದ್ರನಿಗೆ ಪ್ರಸ್ತುತ ರಾಜಕಾರಣದಲ್ಲಿ ಜಾಗ ಇಲ್ಲ, ಸ್ಮಶಾನದಲ್ಲಿ ಮಾತ್ರ ಆತನಿಗೆ ಜಾಗ ಎಂದಾಗ. ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತೇನೆ ಎಂಬ ಭ್ರಮೆ ತಮಗೂ ಇಲ್ಲ. ಆದರೆ ಗಣನೀಯ ಬದಲಾವಣೆ ತರುವುದಾಗಿ ಸಚಿವ ಕೋಟಾಶ್ರೀನಿವಾಸ ಪೂಜಾರಿ ಹೇಳಿದರು.

ಕಾಂಗ್ರೆಸ್‍ನ ಸದಸ್ಯ ಆರ್.ಧರ್ಮಸೇನ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2008ರಿಂದ ಈವರೆಗೂ ರಾಜ್ಯದಲ್ಲಿ 7832 ಮಂಜೂರಾತಿ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಭವನಗಳ ನಿರ್ಮಾಣಕ್ಕೆ 2746 ಮುಕ್ತಾಯವಾಗಿವೆ. ಪ್ರತಿಭವನಕ್ಕೆ ಎರಡು ಕೋಟಿ ರೂಪಾಯಿಗೆ ಮಂಜೂರಾತಿ ಪಡೆದು ಆಮೇಲೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿ ಸುತ್ತಾರೆ. ಕೆಲವಡೆ ಬಹಳಷ್ಟು ಭವನಗಳು ಅಪೂರ್ಣಗೊಂಡಿವೆ ಎಂದರು.

ಅರ್ಧಕ್ಕೆ ನಿಂತಿರುವ ಭವನಗಳನ್ನು ಜೆಸಿಬಿಯಿಂದ ನೆಲ ಸಮ ಮಾಡಿ ಕೊಟ್ಟರೆ ಆ ಖಾಲಿ ಜಾಗದಲ್ಲಿ ಮಕ್ಕಳಾದರೂ ಆಟ ಆಡಿಕೊಳ್ಳುತ್ತಾರೆ ಎಂದು ಧರ್ಮಸೇನ್ ಹೇಳಿದಾಗ, ಅರ್ಧ ಭಾಗ ನಿರ್ಮಾಣವಾಗಿ ಬಾಕಿ ಉಳಿದಿರುವ ಭವನಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Facebook Comments