“ಸಚಿವ ಸ್ಥಾನಕ್ಕೆ ಗೂಟಾ ಹೊಡ್ಕೊಂಡು ಕೂತಿಲ್ಲ, ಹೋದ್ರೆ ಹೋಗಲಿ”

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ,ಜು.19- ಮಂತ್ರಿ ಸ್ಥಾನ ಹೋದರೆ ಹೋಗಲಿ, ನಮಗೆ ಅದರಿಂದ ಬೇಸರವಿಲ್ಲ. ಆದರೆ ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಆ ಆಡಿಯೋ ಕುರಿತಂತೆ ತನಿಖೆ ಬೇಕಿದ್ದರೆ ಮಾಡಲಿ. ನಮಗೆ ಅವರ ಮೇಲೆ ನಂಬಿಕೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಕುರಿತ ಗೊಂದಲದ ನಡುವೆ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋವೊಂದು ನಿನ್ನೆ ಸುದ್ದಿ ಮಾಡಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು. ಷಡ್ಯಂತರಗಳಿಂದ ಯಾರು ಏನೂ ಮಾಡಲು ಸಾಧ್ಯವಿಲ್ಲ.

ನಳೀನ್‍ಕುಮಾರ್ ಅವರನ್ನು ಬಲಿಪಶು ಮಾಡಬೇಡಿ ರಾಜ್ಯಾಧ್ಯಕ್ಷರಾದಾಗಿನಿಂದ ವ್ಯವಸ್ಥಿತವಾಗಿ ಪಕ್ಷವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಬೂತ್ ಮಟ್ಟದಿಂದ ಸಂಘಟನೆ ಮಾಡಿ ಉತ್ತಮ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಮುಂದಿನ ಅವಧಿಗೂ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಾರೋ? ಏನೋ ಹೇಳಿದರೂ ಅಂದರೆ ನಾನೇಕೆ ಪ್ರತಿಕ್ರಿಯಿಸಲಿ, ನನಗೆ ಕೊಟ್ಟಿರುವ ಕೆಲಸವನ್ನು ಮಾಡುತ್ತೇನೆ. ಮಂತ್ರಿ ಸ್ಥಾನ ಹೋದರೆ ಹೋಯ್ತು. ಕರ್ನಾಟಕದಲ್ಲಿ ಕೋಟಿ ಕೋಟಿ ಜನ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲ ಮಂತ್ರಿಯಾಗಿದ್ದಾರಾ ಎಂದು ಪ್ರಶ್ನಿಸಿದರು. ರಾಜಕಾರಣ ಎಂದ ಕೂಡಲೆ ಎಂಎಲ್‍ಎ, ಮಂತ್ರಿ, ಮುಖ್ಯಮಂತ್ರಿಯಾಗಿಯೇ ಇರಬೇಕೆಂದು ನಾನು ಭಾವಿಸಿಲ್ಲ. ಅಂತಹ ಅಧಿಕಾರಗಳಿಗೆ ಗೂಟ ಹೊಡೆದುಕೊಂಡು ಇರಲು ಮಾತ್ರ ನಾನು ರಾಜಕಾರಣದಲ್ಲಿಲ್ಲ. ಮಂತ್ರಿ ಸ್ಥಾನ ಹೋದರೂ ನನಗೆ ಬೇಸರವಿಲ್ಲ ಎಂದರು.

ನನ್ನ ಸ್ಥಾನಕ್ಕೆ ರಾಜೀನಾಮೆ ಕೇಳಿದರೂ ಕೊಡುತ್ತೇನೆ. ಇಡೀ ದೇಶದಲ್ಲೇ ಯುವಕರಿಗೆ ಜವಾಬ್ದಾರಿ ಕೊಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈಗಾಗಲೇ ನನಗೆ 72 ವರ್ಷ ದಾಟಿದೆ. ಹಿಂದೂ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ನನಗೆ ಯಾವ ಜವಾಬ್ದಾರಿ ಕೊಡುತ್ತಾರೋ ಅದನ್ನು ನಿರ್ವಹಿಸುತ್ತಿದ್ದೇನೆ ಎಂದರು.

ಸಂಘಟನೆಯ ಮೂಲಕ ಬೆಳೆದು ಬಂದ ನಾನು ಶಿವಮೊಗ್ಗದಿಂದ ವಿಧಾನಸಭೆಗೆ ಆಯ್ಕೆಯಾಗಿ ನಂತರ ಪಕ್ಷದ ಅಧ್ಯಕ್ಷನಾಗಿ ವಿವಿಧ ಇಲಾಖೆಗಳ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಆಡಿಯೋ ವೈರಲ್ ಕುರಿತಂತೆ ಸ್ವತಃ ನಳೀನ್‍ಕುಮಾರ್ ಕಟೀಲ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ತನಿಖೆಯ ಅಗತ್ಯವಿಲ್ಲ. ಆದಾಗ್ಯೂ ಸಿಎಂಗೆ ಪತ್ರ ಬರೆಯುವವರು ಬರೆಯಲಿ, ತನಿಖೆಯಾಗಲಿ ಎಂದು ಹೇಳಿದರು.

# ಎಚ್‍ಡಿಕೆ ವಿರುದ್ಧ ಗರಂ:
ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ಹೋದಾಗ ಕೊಂಡೊಯ್ದ ಆರು ಬ್ಯಾಗ್‍ಗಳಲ್ಲಿ ಏನಿತ್ತು ಎಂದು ಪ್ರಶ್ನಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೀಳುಮಟ್ಟಕ್ಕೆ ಇಳಿಯಬಾರದಿತ್ತು. ಮುಖ್ಯಮಂತ್ರಿಯವರು ಪ್ರಧಾನಿಯವರಿಗೆ ಯಾವುದೇ ಆಸೆ, ಆಮಿಷ ತೋರಿಸಲು ಹೋಗಿರಲಿಲ್ಲ. ಪ್ರಧಾನಿ ಹಾಗೂ ರಾಷ್ಟ್ರ ನಾಯಕರಿಗೆ ಅಭಿನಂದನೆ ಸಲ್ಲಿಸಲು ತೆರಳಿದ್ದರು. ಓರ್ವ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ರಾಜ್ಯದಲ್ಲಿ ಗ್ರಾಪಂ ಚುನಾವಣೆ ಮುಗಿದ ನಂತರ ಆಯ್ಕೆಯಾಗಿರುವ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಗ್ರಾಮಪಂಚಾಯ್ತಿಯ ಕೆಲಸಗಳ ಬಗ್ಗೆ ತರಬೇತಿ ನೀಡಲು ಈಗಾಗಲೇ ಶಿವಮೊಗ್ಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಂತೆ ಚಿತ್ರದುರ್ಗ, ದಾವಣಗೆರೆ, ಕೊಪ್ಪಳದಲ್ಲಿ ಇದೇ 25, 26ರಂದು ತರಬೇತಿ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಜಲಶಕ್ತಿ ಅಭಿಯಾನದಡಿ ಕೃಷಿ ಹೊಂಡ, ತೆರೆದ ಬಾವಿ, ಬದು, ಚೆಕ್‍ಡ್ಯಾಂ, ಕಲ್ಯಾಣಿ, ಕೆರೆ ಅಭಿವೃದ್ಧಿ ಹಾಗೂ ಮಳೆ ನೀರು ಕೊಯ್ಲು ಸೇರಿದಂತೆ ಒಟ್ಟು 2,32,486 ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲೂ ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಒದಗಿಸಿರುವುದು ಒಂದು ಉತ್ತಮ ಕೆಲಸವಾಗಿದೆ.

ಪ್ರಧಾನಮಂತ್ರಿಗಳ ನರೇಗಾ ಯೋಜನೆಯಡಿ ಪ್ರಸಕ್ತ ಸಾಲಿನ ಜು.20ರವರೆಗೂ 608 ಲಕ್ಷ ಮಾನವ ದಿನಗಳನ್ನು ನೀಡಲಾಗಿದೆ. ಕಳೆದ ವರ್ಷದ ಜುಲೈನಲ್ಲಿ 550 ಲಕ್ಷ ಮಾನವದಿನಗಳನ್ನು ನೀಡಲಾಗಿತ್ತು. ಈ ಬಾರಿ 48.17 ಲಕ್ಷ ಜಾಬ್ ಮೂಲಕ ಉದ್ಯೋಗ ಒದಗಿಸಲಾಗಿದೆ. 1760 ಕೋಟಿ ಮೊತ್ತದ ಕೂಲಿಯನ್ನು ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಿವಮೊಗ್ಗದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನಾ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಸಂಪುಟದಲ್ಲಿ ಇದನ್ನು ಚರ್ಚಿಸಿ ಸೂಕ್ತ ದಿನಾಂಕ ನಿಗದಿಪಡಿಸುವುದಾಗಿ ಹೇಳಿದರು.

Facebook Comments