‘ಸದ್ಯ ನಾನಂತು ಸಿಎಂ ಆಗುವ ಆಸೆಯಿಟ್ಟುಕೊಂಡಿಲ್ಲ’ : ಮುರುಗೇಶ್ ನಿರಾಣಿ

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರರ್ಗಿ,ಡಿ.4- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಾಣಿಯವರು ಮುಂದೆ ಸಿಎಂ ಆಗ್ತಾರೆ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ನಾನು ಸಿಎಂ ಆಗುವ ಮಾತೇ ಬರುವುದಿಲ್ಲ. ನಾನು ಅಂತಹ ಆಸೆ ಇಟ್ಟುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.

2023ರಲ್ಲಿ ಅವರ ನೇತೃತ್ವದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ. 2023ರಲ್ಲಿ 125ಕ್ಕಿಂತ ಹೆಚ್ಚು ಸೀಟ್‍ಗಳನ್ನು ಗೆಲ್ಲುವ ವಿಶ್ವಾಸ ಇದೆ. 125ಕ್ಕಿಂತ ಹೆಚ್ಚು ಸೀಟು ಬಂದ ಮೇಲೆ ಸಂಘ ಪರಿವಾರ, ಹೈಕಮಾಂಡ್ ಯಾರು ಸಿಎಂ ಆಗಬೇಕು ಎಂಬುದನ್ನು ತೀರ್ಮಾನಿಸುತ್ತಾರೆ ಎಂದರು.

ಸದ್ಯ ನಾನಂತು ಸಿಎಂ ಆಗುವ ಆಸೆಯಿಟ್ಟುಕೊಂಡಿಲ್ಲ. ಆ ಕನಸು ಕೂಡ ಕಂಡಿಲ್ಲ. ಮುಂದೆ ನನಗೆ ಪಕ್ಷ, ಶಾಸಕ ಸ್ಥಾನಕ್ಕೆ ನಿಲ್ಲಬೇಡ, ಪಕ್ಷದ ಕೆಲಸ ಮಾಡಿಕೊಂಡು ಇರಲು ಹೇಳಿದ್ರೂ ಅದಕ್ಕೂ ಸಿದ್ದವಾಗಿದ್ದೇನೆ ಎಂದು ಹೇಳಿದರು.

ಕೊರೊನಾ 3ನೇ ಅಲೆ ಎದುರಿಸಲು ಸರ್ಕಾರ ಸಮರ್ಥವಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಆರೋಗ್ಯ ಸಚಿವರು ಒಂದಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೆ ರೀತಿಯಲ್ಲಿ ತೊಂದರೆಯಾಗದ ಹಾಗೆ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಪರಿಷತ್ ಚುನಾವಣೆಗೆ ಜೆಡಿಎಸ್ ಬೆಂಬಲ ನೀಡುವುದರ ಬಗ್ಗೆ ಪ್ರತಿಕ್ರಿಯಿಸಿದ ನಿರಾಣಿ, ದೊಡ್ಡ ದೊಡ್ಡವರ ಲೆಕ್ಕದಲ್ಲಿ ಬೆಂಬಲ ನೀಡುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಜೆಡಿಎಸ್ ಬೆಂಬಲ ನೀಡುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಜೆಡಿಎಸ್ ಪಕ್ಷದ ಮುಖಂಡರು ಹಾಗೂ ನಮ್ಮ ಪಕ್ಷದ ಮುಖಂಡರು ಅದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

Facebook Comments