ಕೋಲಾರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ 750 ಕೋಟಿ ಪ್ರಸ್ತಾವನೆ : ಸಚಿವ ನಾಗೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ,ಜ.5- ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು 750 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ನಾಗೇಶ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ 2021-22 ನೇ ಸಾಲಿನ ಆಯವ್ಯಯದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಳಬಾಗಿಲು ನಗರಕ್ಕೆ ಒಳಚರಂಡಿ ಯೋಜನೆಗೆ ಪ್ರಸ್ತಾವನೆ ಹಾಗೂ ಸೋಮೇಶ್ವರ ದೇವಸ್ಥಾನ, ಅಂತರಗಂಗೆ, ಆವಣಿ, ಕುರುಡುಮಲೆ, ಕೋಟಿಲಿಂಗ, ಚಿಕ್ಕತಿರುಪತಿ ಮುಂತಾದ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯು ಅಂತರ ರಾಜ್ಯ ಗಡಿಯಲ್ಲಿರುವುದರಿಂದ ಕೋಲಾರದಲ್ಲಿ ಹೈಟೆಕ್ ಬಸ್‍ನಿಲ್ದಾಣ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಸುಸಜ್ಜಿತ ಹೋಟೆಲ್ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ಕೋಲಾರಕ್ಕೆ ಹೊಸ ಐ.ಬಿ. ಪರಿವೀಕ್ಷಣಾ ಮಂದಿರ ಅಗ್ಯವಿದ್ದು ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, 22 ಎಕರೆ ಜಾಗದಲ್ಲಿ 1200 ಬಡವರಿಗೆ ಉಚಿತ ನಿವೇಶನ ನೀಡಲು ಲೇಔಟ್ ಅಭಿವೃದ್ಧಿ ಪಡಿಸಲು 20 ಕೋಟಿ ರೂ. ಹಾಗೂ ಮಾಲೂರು ಕೆರೆಗೆ 23.85 ರೂ. ಪ್ರಸ್ತಾವನೆ ನೀಡಿದರು. ಮಾಲೂರಿನ ಸಮಗ್ರ ಅಭಿವೃದ್ಧಿಗಾಗಿ 30 ಕೋಟಿಗಳ ವಿವಿಧ ಕಾರ್ಯಕ್ರಮಗಳ ಪ್ರಸ್ತಾವನೆ ಸಲ್ಲಿಸಿದರು. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ನೆನಪಿನ ಅಧ್ಯಯನ ಕೇಂದ್ರವನ್ನು ಮಾಲೂರಿನಲ್ಲಿರುವ ಅವರ ಸ್ವಂತ ಗ್ರಾಮ ಮಾಸ್ತಿಯಲ್ಲಿ ಸ್ಥಾಪಿಸಲು ಸಲಹೆ ನೀಡಿದರು.

ಶಾಸಕರಾದ ರೂಪಕಲಾ ಶಶಿಧರ್, ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಜಿಪಂ ಸಿಇಒ ಎನ್.ಎಂ.ನಾಗರಾಜ್, ಉಪ ವಿಭಾಗಾಧಿಕಾರಿ ಸೋಮಶೇಖರ್, ಪತ್ರಕರ್ತ ಬಿ.ವಿ.ಗೋಪಿನಾಥ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments