ರೈತರಿಗೆ ತೊಂದರೆ ಆಗಲು ಬಿಡಲ್ಲ : ಸಚಿವ ಪ್ರಭು ಚವ್ಹಾಣ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.23-ಹಸು ಸಾಕಣೆ ಮಾಡಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯಬೇಕು ಎಂಬ ನಿರ್ಣಯವನ್ನು ಕೈ ಬಿಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ರಾಜ್ಯದ ರೈತರ ಹಿತದೃಷ್ಟಿಯಿಂದ ಅನುಮತಿ ಪಡೆಯುವುದರಿಂದ ವಿನಾಯಿತಿ ನೀಡಬೇಕು.

ಪಶುಸಂಗೋಪನೆ ಇಲಾಖೆಯ ಗಮನಕ್ಕೆ ತಾರದೆ ರಾಜ್ಯದಲ್ಲಿ ಡೇರಿ ಫಾರಂ ಮತ್ತು ಗೋಶಾಲೆ ಆರಂಭಿಸಲು ಅನುಮತಿ ಪಡೆಯಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿರುವುದು ರಾಜ್ಯದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ ಎಂದಿದ್ದಾರೆ.  ರೈತರು, ಪಶುಪಾಲಕರು ದೇಶದ ಬೆನ್ನೆಲುಬಾಗಿದ್ದು, ರಾಷ್ಟ್ರದ ಜಿಡಿಪಿಯಲ್ಲಿ ಅವರ ಪಾಲು ಗಮನಾರ್ಹವಾಗಿದೆ.

ಇದನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ರೈತಾಪಿ ವರ್ಗಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದು ಹಸು ಸಾಕಣೆ ಮಾಡಬೇಕು ಎಂದು ಹೇಳಿರುವುದಕ್ಕೆ ರಾಜ್ಯದ ಅನೇಕ ರೈತರು ಆಂತಕಗೊಂಡು ಕರೆ ಮಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರ, ಪಟ್ಟಣ ಹಾಗೂ ಹಳ್ಳಿಗಳಿಂದ 200 ಮೀ. ದೂರದಲ್ಲಿ ಗೋಶಾಲೆ ಹಾಗೂ ಡೈರಿ ಫಾರಂ ಸ್ಥಾಪಿಸಬೇಕು ಎಂದು ತಿಳಿಸಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ವಿಚಾರವನ್ನು ನಮ್ಮ ಗಮನಕ್ಕೆ ತಂದಿಲ್ಲ. ಆದರೂ ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಆಗಲು ಬಿಡುವಿದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಪಶುಸಂಗೋಪನೆ ಇಲಾಖೆಯಿಂದ ಹೈನುಗಾರಿಕೆಗೆ ಉತ್ತೇಜನ ನೀಡಲು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಷರತ್ತುಗಳನ್ನು ವಿಧಿಸಿದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಯಾರೂ ಮುಂದೆ ಬರುವುದಿಲ್ಲ. ಈ ನಿರ್ಧಾರವನ್ನು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಯಾವ ಆಧಾರದ ಮೇಲೆ ಕೈಗೊಂಡಿದೆ ಎಂದು ತಿಳಿದಿಲ್ಲ. ನಾನು ಅರಣ್ಯ, ಪರಸರ ಸಚಿವರು ಹಾಗೂ ಕಾನೂನು ಸಚಿವರ ಜೊತೆ ಸಮಾಲೋಚಿಸಿ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

Facebook Comments