ಬಹುಪಯೋಗಿ 2.0 ಅಪ್ಲಿಕೇಷನ್ : ಸಚಿವ ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.8- ವಿವಿಧ ಸರ್ಕಾರಿ ಇಲಾಖೆಗಳಿಗೆ ಸಲ್ಲಿಸಬೇಕಾದ ದೂರುಗಳನ್ನು ನಮ್ಮ ಬೆಂಗಳೂರು ಅಪ್ಲಿಕೇಷನ್ ಎಂಬ ಒಂದೇ ತಂತ್ರಾಂಶದ ಮೂಲಕ ದಾಖಲಿಸಬಹುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ವಿಧಾನಸೌಧದ ಮುಂಭಾಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದ ಸಹಾಯ 2.0 ಅಪ್ಲಿಕೇಷನ್, ನಮ್ಮ ಬೆಂಗಳೂರು ಅಪ್ಲಿಕೇಷನ್, ಪಿಒಎಸ್ ದಂಡ ವಿಧಿಸುವ ಯಂತ್ರ, ಯಾಂತ್ರಿಕ ಕಸ ಗುಡಿಸುವ ವಾಹನ ಹಾಗೂ ಆ್ಯಂಬುಲೆನ್ಸ್‍ಗಳನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಬಿಎಂಪಿ, ಬೆಸ್ಕಾಂ, ಬೆಂಗಳೂರು ಜಲ ಮಂಡಳಿ, ಬಿಡಿಎ, ಬಿಎಂಆರ್‍ಡಿಎ, ಬಿಎಂಆರ್‍ಸಿಎಲ್, ಬಿಎಂಟಿಸಿ ಸೇರಿದಂತೆ ವಿವಿಧ ಇಲಾಖೆಗಳ ದೂರುಗಳನ್ನು ಒಂದೇ ಸೂರಿನಡಿ ಇತ್ಯರ್ಥ ಪಡಿಸಲು ನಮ್ಮ ಬೆಂಗಳೂರು ಅಪ್ಲಿಕೇಷನ್‍ನ್ನು ಬಿಬಿಎಂಪಿ ಅಭಿವೃದ್ಧಿಪಡಿಸಿದೆ ಎಂದರು. ಹಾಗೆಯೇ ನಾಗರಿಕರ ಕುಂದುಕೊರತೆ ನಿವಾರಿಸಲು ಸಹಾಯ 2.0 ಅಪ್ಲಿಕೇಷನ್‍ನ್ನು ಅಭಿವೃದ್ಧಿ ಪಡಿಸಲಾಗಿದ್ದು, ನಗರದಲ್ಲಿರುವ ಸಮಸ್ಯೆಗಳ ಬಗ್ಗೆ ಫೋಟೋ ವಿಡಿಯೋ ಮೂಲಕ ದೂರು ದಾಖಲಿಸಬಹುದು ಎಂದು ಹೇಳಿದರು.

ಪಿಒಎಸ್ ದಂಡ ವಿಧಿಸುವ ಯಂತ್ರವನ್ನು ಮಾರ್ಷಲ್‍ಗಳಿಗೆ ಇಂದು ನೀಡಲಾಗಿದ್ದು, ಸ್ಥಳದಲ್ಲೇ ಕ್ರೆಡಿಟ್, ಡೆಬಿಟ್ ಕಾರ್ಡ್‍ಗಳನ್ನು ಸ್ವೈಪ್ ಮಾಡುವ ಮೂಲಕ ದಂಡ ವಿಧಿಸಿ ಎಲೆಕ್ಟ್ರಾನಿಕ್ ಇ ರಸೀದಿ ಮುದ್ರಿಸಿ ನೀಡಲಾಗುತ್ತದೆ. ಘನತ್ಯಾಜ್ಯ ನಿರ್ವಹಣೆ ನಿಯಮಗಳಿಗೆ ಅನುಗುಣವಾಗಿ ದಂಡ ವಿಧಿಸಲಾಗುತ್ತಿದ್ದು, 200ಕ್ಕೂ ಹೆಚ್ಚು ಪಿಒಎಸ್ ಯಂತ್ರಗಳನ್ನು ಮಾರ್ಷಲ್‍ಗಳಿಗೆ ಇಂದು ನೀಡಲಾಗಿದೆ ಎಂದು ಹೇಳಿದರು.

ಇಂದು ಲೋಕಾರ್ಪಣೆಯಾದ 6 ಆ್ಯಂಬುಲೆನ್ಸ್‍ಗಳು 247 ಕಾರ್ಯನಿರ್ವಹಿಸಲಿವೆ. ಪ್ರತಿ ವಾಹನಕ್ಕೆ 11.21 ಲಕ್ಷ ರೂ. ವೆಚ್ಚವಾಗಿದೆ ಎಂದು ತಿಳಿಸಿದರು.

Facebook Comments