ಕೊರೊನಾ ಜತೆಗೆ ಆರ್ಥಿಕ ಚಟುವಟಿಕೆಗಳು ಆರಂಭವಾಗಲಿ : ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಮೇ 28- ಲಾಕ್‍ಡೌನ್ ಜಾರಿಯಲ್ಲಿದ್ದ ಕಾರಣ ದೇಶ ಹಾಗೂ ರಾಜ್ಯಕ್ಕೆ ಆರ್ಥಿಕವಾಗಿ ಸಾಕಷ್ಟು ಸಮಸ್ಯೆ ಎದುರಾಗಿದೆ. ಕೊರೊನಾ ಜತೆಗೆ ಆರ್ಥಿಕ ಚಟುವಟಿಕೆಗಳನ್ನು ನಡೆಸಬೇಕು. ಆರ್ಥಿಕವಾಗಿ ಏಳಿಗೆ ಹೊಂದಲು ವಾಣಿಜ್ಯ-ವ್ಯವಹಾರ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೆಳಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಎಲ್ಲಿಯವರೆಗೆ ಇರುತ್ತದೋ ಗೊತ್ತಿಲ್ಲ. ಹೀಗೇ ಪರಿಸ್ಥಿತಿ ಮುಂದುವರಿದರೆ ಜನರ ಬದುಕು ಕಷ್ಟವಾಗುತ್ತದೆ. ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಎಲ್ಲ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಭೆ ಕರೆದು ಆರ್ಥಿಕ ಚಟುವಟಿಕೆ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಜತೆಗೆ ಆರ್ಥಿಕ ಚಟುವಟಿಕೆಗಳಿಗೆ ಒತ್ತು ನೀಡಲು ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವೃದ್ಧಾಪ್ಯ ವೇತನ ಪಡೆಯಲು ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಹಸೀಲ್ದಾರರ ಕಚೇರಿಗಳಿಗೆ ಅಲೆದಾಡಬೇಕಿಲ್ಲ. ಬದಲಾಗಿ 60 ವರ್ಷ ಪೂರೈಸಿದ ಬಡವರಿಗೆ ಮನೆ ಬಾಗಿಲಿಗೇ ಸೌಲಭ್ಯ ಹುಡುಕಿಕೊಂಡು ಬರಲಿವೆ. ಜಿಲ್ಲಾ ಮತ್ತು ತಾಲ್ಲೂಕು ಕಚೇರಿಯಲ್ಲಿ ಆಧಾರ್ ಕಾರ್ಡ್‍ಗಳ ಪಟ್ಟಿಯಿದ್ದು, ಯಾರಿಗೆ 60 ವರ್ಷ ತುಂಬಿರುತ್ತದೆಯೋ ಅವರಿಗೆ ಅಂಚೆ ಮೂಲಕ ಇಲ್ಲವೆ ಗ್ರಾಮ ಲೆಕ್ಕಿಗರೇ ಹೋಗಿ ವೃದ್ಧಾಪ್ಯ ವೇತನ ಯೋಜನೆಯ ಸೇರ್ಪಡೆ ಪತ್ರ ನೀಡಬೇಕು ಎಂದು ಆದೇಶಿಸಿದರು.

ಪ್ರತಿ ತಿಂಗಳಿಗೆ ಒಂದು ಬಾರಿ ಜಿಲ್ಲಾಧಿಕಾರಿಗಳು ಒಂದು ಗ್ರಾಮಕ್ಕೆ ಭೇಟಿ ನೀಡಬೇಕು. ಬೆಳಗ್ಗೆ 10 ರಿಂದ ಸಂಜೆಯವರೆಗೆ ಗ್ರಾಮದಲ್ಲಿಯೇ ಇದ್ದು, ಅಲ್ಲಿನ ಸಮಸ್ಯೆಗಳನ್ನು ಅರಿತು ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಅಲ್ಲಿನ ರೈತರ ಮನೆಯಲ್ಲಿ ಊಟ ಮಾಡಬೇಕು. ಕೆಲ ಸಂದರ್ಭದಲ್ಲಿ ಎಸಿ, ತಹಸೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಹಾಜರಿರಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಆರ್ಥಿಕ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲು ನಿರಂತರವಾಗಿ ಸಭೆಗಳನ್ನು ಹಂತ ಹಂತವಾಗಿ ನಡೆಸಿಕೊಂಡು ಬರಲಾಗಿದೆ. ಜಿಲ್ಲೆಯ ಜನರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗುತ್ತಿದೆ. ಲಾಕ್‍ಡೌನ್ ವೇಳೆಯಿಂದಲೂ ಕೈಗಾರಿಕೆಗಳು ನಡೆಸಿಕೊಂಡು ಬರಲಾಗಿದೆ ಎಂದು ತಿಳಿಸಿದರು. ಎಡಿಸಿ ಪೂಜರ ವೀರಮಲ್ಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಆಧಾರ್ ಲಿಂಕ್ ನೋಂದಣಿಯಲ್ಲಿ ಶೇ. 99.7 ಪ್ರಗತಿ ಸಾಧಿಸಿದ್ದು, ರಾಜ್ಯದಲ್ಲಿ ಜಿಲ್ಲೆ ಮೊದಲನೆ ಸ್ಥಾನದಲ್ಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರ, ರಾಮಪ್ಪ, ಪ್ರೊ.ಲಿಂಗಣ್ಣ, ಜಿಪಂ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಮೇಯರ್ ಅಜಯ್ ಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಪಂ ಸಿಇಒ ಪದ್ಮಾ ಬಸವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಡಿಎಚ್‍ಒ ಡಾ.ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಉಪಸ್ಥಿತರಿದ್ದರು.

Facebook Comments