ಸೋಂಕಿತ ಪ್ರದೇಶಗಳು ಮಾತ್ರ ಸೀಲ್‍ಡೌನ್: ಸಚಿವ ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.26- ಕೋವಿಡ್ ಸೋಂಕು ಹೆಚ್ಚು ಹರಡುತ್ತಿರುವಂತಹ ಪ್ರದೇಶಗಳನ್ನು ಮಾತ್ರ ಗುರುತಿಸಿ ಸಂಪೂರ್ಣ ಸೀಲ್‍ಡೌನ್ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಕೆಟ್ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗಿ ಹರಡುತ್ತಿರುವುದು ಸರ್ವೆ ಮೂಲಕ ಕಂಡು ಬಂದಿದೆ. ಹೀಗಾಗಿ ಅಂತಹ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗುವುದು ಎಂದರು.

ಮೆಡಿಕಲ್ ಕಾಲೇಜುಗಳಲ್ಲಿರುವ 5,000 ಬೆಡ್‍ಗಳನ್ನು ಪಡೆದುಕೊಳ್ಳುತ್ತೇವೆ. ರಾಜ್ಯದ ಜನರು ಭಯಪಡಬೇಕಾದ ಅವಶ್ಯಕತೆ ಇಲ್ಲ. ನಮ್ಮೊಂದಿಗೆ ಸಹಕರಿಸಿ. ಒಬ್ಬ ಐಎಎಸ್ ಅಧಿಕಾರಿಯನ್ನು ಸೋಂಕಿತರಿಗೆ ಬೆಡ್ ಗಳ ವ್ಯವಸ್ಥೆ ನಿರ್ವಹಣೆಗಾಗಿಯೇ ನಿಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು. ಶೇ. 60 ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಬರುತ್ತಿದ್ದಾರೆ.

ಖಾಸಗಿ ಲ್ಯಾಬ್‍ಗಳ ವರದಿ ಬಂದ ಬಳಿಕವೂ ಸೋಂಕಿತ ವ್ಯಕ್ತಿ ಮತ್ತೊಮ್ಮೆ ಸರ್ಕಾರಿ ಲ್ಯಾಬ್ ಗಳಲ್ಲಿ ಪರಿಶೀಲಿಸಬೇಕಿದೆ. ಇದರಿಂದಾಗಿ ಆಸ್ಪತ್ರೆಗೆ ಕರೆದೊಯ್ಯುವುದು ತಡವಾಗುತ್ತಿದೆ ಎನ್ನಲಾಗುತ್ತಿದೆ. ವ್ಯವಸ್ಥಿತವಾಗಿ ಚಿಕಿತ್ಸೆ ನೀಡಲಿದ್ದೇವೆ. ಆತಂಕ ಪಡುವ ಅಗತ್ಯವಿಲ್ಲ ತಮ್ಮ ಪ್ರಾಣ ರಕ್ಷಣೆ ಕಾಳಜಿ ವಹಿಸಿ, ಅವಶ್ಯಕತೆ ಇದ್ದಲ್ಲಿ ಮಾತ್ರ ಹೊರ ಬನ್ನಿ ಎಂದು ಜನರಿಗೆ ಕರೆ ನೀಡಿದರು.

ಸರ್ಕಾರ ರಾಜ್ಯದ ಜನರೊಂದಿಗಿದೆ ಎಂದ ಅವರು, ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಭಿಪ್ರಾಯ ಪಡೆಯುತ್ತೇವೆ ಎಂದರು.

Facebook Comments