ನೆರೆ ಪರಿಹಾರ ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಡ ಹೇರಲು ಸಿಎಂ ದೆಹಲಿಗೆ : ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.14- ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ನೆರೆ ಪರಿಹಾರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ದೆಹಲಿಗೆ ತೆರಳಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.  ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಬಿಡುಗಡೆ ಮಾಡುವಂತೆ ಸಂಬಂಧಪಟ್ಟವರ ಜೊತೆ ಮಾತನಾಡಲು ಸಿಎಂ ಜೊತೆ ದೆಹಲಿಗೆ ತೆರಳಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಇನ್ನು ಅಂತಿವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯಕ್ಕೆ ಹೆಚ್ಚಿನ ಪರಿಹಾರ ಕೇಳಬೇಕೆಂದು ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಅವರೊಂದಿಗೆ ತೆರಳಬೇಕೇ? ಇಲ್ಲವೇ ಪ್ರತ್ಯೇಕವಾಗಿ ದೆಹಲಿಗೆ ಹೋಗಿ ಸಂಬಂಧಪಟ್ಟ ಇಲಾಖಾ ಸಚಿವರನ್ನು ಭೇಟಿ ಮಾಡಬೇಕೆ ಎಂಬುದರಬಗ್ಗೆ ಇನ್ನು ಅಂತಿಮಗೊಂಡಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ನೆರವು ನೀಡುವಂತೆ ಕೋರುವುದು ಖಚಿತ ಎಂದು ಹೇಳಿದರು.

ಕಳೆದ ಹಲವು ವರ್ಷಗಳಿಂದ ಡೀಮ್ಡ್ ಫಾರೆಸ್ಟ್ ಮತ್ತು ಕಂದಾಯ ಜಮೀನಿನ ಬಗ್ಗೆ ತಕರಾರಿತ್ತು. ಇಂದು ಅಧಿಕಾರಿಗಳ ಸಭೆ ನಡೆಸಿ 6 ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ಹಾಗೂ 3.3 ಲಕ್ಷ ಹೆಕ್ಟೇರ್‍ನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡುವ ಬಗ್ಗೆ ನಿರ್ಧರಿಸಲಾಗಿದೆ.ಇದರಿಂದ ನೆನಗುದಿಗೆ ಬಿದ್ದಿದ್ದ ವಿವಾದ ಸುಖಾಂತ್ಯವಾಗಲಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು.

ಸರ್ವೇ ಸಾಮಾನ್ಯ:  ಡ್ರಗ್ ಜಾಲದಲ್ಲಿ ಸಿಸಿಬಿ ಬಂಧನಕ್ಕೊಳಪಟ್ಟಿರುವ ಸಂಜನಾ ಆಪ್ತ ರಾಹುಲ್ ಜೊತೆಗಿನ ತಮ್ಮ ಫೋಟೊ ಇರುವ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನನ್ನ ಕ್ಷೇತ್ರದಲ್ಲಿ ನಾಮಕರಣ ಕಾರ್ಯಕ್ರಮವಿತ್ತು. ಅಲ್ಲಿ ಸಿಕ್ಕಾಗ ತೆಗೆದ ಫೋಟೊ ಇದು ಎಂದು ಸ್ಪಷ್ಟನೆ ನೀಡಿದರು.  ಕೊರೊನಾ ಕುರಿತಂತೆ ಮಾಸ್ಕ್ ಧರಿಸುವ ಬಗ್ಗೆ ನನ್ನ ಕ್ಷೇತ್ರದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವಿತ್ತು. ಆ ಸಂದರ್ಭದಲ್ಲಿ ಯಾರೋ ಫೋಟೊ ತೆಗೆದಿರಬಹುದು. ಸಾರ್ವಜನಿಕ ಬದುಕಿನಲ್ಲಿದ್ದಾಗ ಇದೆಲ್ಲ ಸರ್ವೇ ಸಾಮಾನ್ಯ ಎಂದು ಹೇಳಿದರು.

ಚಿತ್ರನಟಿ ರಾಗಿಣಿ ಕೂಡ ಇದೇ ಕಾರಣಕ್ಕಾಗಿ ನನ್ನ ಕ್ಷೇತ್ರಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಫೋಟೋ ತೆಗೆದಿರುತ್ತಾರೆ. ಅದಕ್ಕೂ ಇದಕ್ಕೂ ಸಂಬಂಧ ಕಲ್ಪಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.  ಫೋಟೊ ತೆಗೆಸಿಕೊಂಡರೆ ಇಂತಹ ಆಪಾದನೆಗಳನ್ನು ಕೇಳಬೇಕು. ಇಲ್ಲದಿದ್ದರೆ ಇವರಿಗೆ ಎಷ್ಟು ದವಲತ್ತು ಎಂದು ಮಾತನಾಡುತ್ತಾರೆ. ತೆಗೆಸಿಕೊಂಡರೂ ತಪ್ಪು, ತೆಗೆಸಿಕೊಳ್ಳದಿದ್ದರೂ ತಪ್ಪು. ಸಾರ್ವಜನಿಕ ಜೀವನದಲ್ಲಿ ಇದ್ದಾಗ ಇಂಥವುಗಳನ್ನು ಕೇಳಬೇಕಾಗುತ್ತದೆ ಎಂದು ಹೇಳಿದರು.

ಪ್ರಕರಣದಲ್ಲಿ ಶಾಸಕ ಜಮೀರ್ ಅಹಮ್ಮದ್ ಹೆಸರು ಕೇಳಿಬರುತ್ತಿರುವುದಕ್ಕೆ, ಅವರು ಎಲ್ಲಾ ಕಡೆಯೂ ಇರುತ್ತಾರೆ. ಇತ್ತೀಚೆಗೆ ಡಿಜೆಹಳ್ಳಿ, ಕೆಜಿಹಳ್ಳಿ ಗಲಭೆಯಾದಾಗ ಅವರ ಹೆಸರು ಕೇಳಿಬಂದಿತ್ತು. ಸದ್ಯ ಜಮೀರ್ ಮುಸ್ಲಿಂ ಸಮುದಾಯದ ನಾಯಕರಾಗಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.  ಯಾರೇ ಆಗಲಿ ವಿದೇಶ ಪ್ರವಾಸ ಮಾಡುವುದು ತಪ್ಪಲ್ಲ. ಆದರೆ ಹವಾಲಾ, ಡ್ರಗ್ಸ್ ದಂಧೆಯಲ್ಲಿ ತಡಗಿಸಿಕೊಳ್ಳುವುದು ಅಪರಾಧವಾಗುತ್ತದೆ. ನನಗೆ ಇಸ್ಪೀಟ್ ಕೂಡ ಆಡುವುದು ಗೊತ್ತಿಲ್ಲ. ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಬಹಳ ನಾಯಕರ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ.

ಪ್ರಶಾಂತ್ ಸಂಬರಗಿ ಹಿಂದಿನ ನಗರ ಪೋಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿದಂತೆ ಅನೇಕರು ಇದ್ದಾರೆ. ಆದರೆ ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಅಶೋಕ್ ಪುನರುಚ್ಚರಿಸಿದರು.

ಸಿಎಂ ಪರಮ ಅಧಿಕಾರ:  ಸಚಿವ ಸಂಪುಟ ವಿಸ್ತರಣೆ ಯಾವಾಗ ಮಾಡಬೇಕು, ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದು ಮುಖ್ಯಮಂತ್ರಿಗಳಿಗಿರುವ ಪರಮ ಅಧಿಕಾರ. ಅದನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.  ಸರ್ಕಾರ ರಚನೆಗೆ ಸಹಾಯ ಮಾಡಿದವರನ್ನು ಮಂತ್ರಿ ಮಾಡಬೇಕೆಂಬುದು ಸಿಎಂ ಅವರ ಉದ್ದೇಶವಾಗಿದೆ. ಅವರಿಗೆ ಕೊಟ್ಟಿರುವ ಮಾತನ್ನು ಬಿಎಸ್‍ವೈ ಉಳಿಸಿಕೊಳ್ಳುತ್ತಾರೆ. ಅಂತಿಮವಾಗಿ ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆ ಬಿಟ್ಟಿದ್ದು ಎಂದು ಹೇಳಿದರು.

ಯಾರು ಏನೇ ಹೇಳಲಿ, ಏನೇ ಊಹಾ ಪೋಹಗಳು ಬರಲಿ ಮುಂದಿನ ಮೂರು ವರ್ಷಗಳ ಅವಧಿಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆ ಯುತ್ತಾರೆ. ಇದರಲ್ಲಿ ಯಾವ ಅನುಮಾನವೂ ಬೇಡ ಎಂದು ಅಶೋಕ್ ಸಿಎಂ ಪರ ಬ್ಯಾಟ್ ಬೀಸಿದರು.  ಮೈ ಕ್ಯಾಪ್ಟನ್ ಇಸ್ ಯಡಿಯೂರಪ್ಪ. ಅವರೇ ಮುಂದಿನ ಮೂರು ವರ್ಷಗಳ ಅವಧಿಗೆ ಸಿಎಂ ಆಗಿ ಇರುತ್ತಾರೆ. ಸ್ಪೀಡ್, ವೈಡ್, ಸ್ಪಿನ್ ಸೇರಿದಂತೆ ಯಾವುದೇ ಬಾಲ್ ಹಾಕಿದರೂ ಎಲ್ಲವನ್ನು ಸಮರ್ಥವಾಗಿ ಎದುರಿಸಿ ಸಿಕ್ಸ್ ಹೊಡೆಯುವ ತಾಕತ್ತು ಅವರಿಗಿದೆ. ಯಡಿಯೂರಪ್ಪ ಸೀಸನ್ ಪೆÇಲಿಟಿಶಿಯನ್ ಎಂದು ಸೂಚ್ಯವಾಗಿ ಹೇಳಿದರು.

ನಿಮ್ಮ ಕ್ಯಾಪ್ಟನ್ ಬದಲಾವಣೆಯಾಗಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಶೋಕ್, ನಮ್ಮ ನಾಯಕ ಯಡಿಯೂರಪ್ಪ. ಸದ್ಯ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸರ್ಕಾರವನ್ನು ಸಮರ್ಥವಾಗಿ ಮುನ್ನೆಡೆಸುತ್ತಿರುವಾಗ ಬದಲಾವಣೆಯ ಮಾತು ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ಬೆಂಗಳೂರು ಮೇಲೆ ಅಶೋಕ್ ಹಿಡಿತ ಸಾಧಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಯಾರೊಬ್ಬರು ಈ ಬಗ್ಗೆ ಅನ್ಯತಾ ಭಾವಿಸುವುದು ಬೇಡ. ನಮ್ಮಲ್ಲಿ ಯಾವುದೇ ಪೈಪೋಟಿ ಇಲ್ಲ. ಬೆಂಗಳೂರಿನ ಉಸ್ತುವಾರಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪ ನೋಡಿಕೊಳ್ಳುತ್ತಿದ್ದಾರೆ. ಹಾಲಿ ನಗರ ಪೋಲೀಸ್ ಆಯುಕ್ತ ಕಮಲ್‍ಪಂಥ್ ಅವರು, ನಾನು ಗೃಹ ಸಚಿವನಾದ ವೇಳೆ ಕಾರ್ಯದರ್ಶಿ ಆಗಿದ್ದರು.

ಸಾರಿಗೆ ಸಚಿವನಾಗಿದ್ದ ವೇಳೆ ಗೌರವ ಗುಪ್ತ ಎಂಡಿ ಆಗಿದ್ದರು, ಹಾಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಕಂದಾಯ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಇದೊಂದೇ ಕಾರಣಕ್ಕಾಗಿ ಯಾರೊಬ್ಬರೂ ಅನ್ಯತಾ ಭಾವಿಸುವುದು ಬೇಡ. ನಮ್ಮಲ್ಲಿ ಯಾವುದೇ ಪೈಪೋಟಿ ಇಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಹೇಳಿದರು.

Facebook Comments