ಎಸ್ಡಿಪಿಐ ಸಂಘಟನೆ ನಿಷೇಧಿಸಲು ಕೇಂದ್ರಕ್ಕೆ ಶಿಫಾರಸು : ಆರ್.ಅಶೋಕ್
ಬೆಂಗಳೂರು, ನ.20- ಎಸ್ಡಿಪಿಐ ಸಂಘಟನೆ ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಇಂದಿಲ್ಲಿ ತಿಳಿಸಿದರು.
ಈ ಸಂಬಂಧ ಕೇಂದ್ರ ಗೃಹ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗುವುದು, ಕೇಂದ್ರ ಹಾಗೂ ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದು , ಈ ಸಂಘಟನೆ ನಿಷೇಧ ಮಾಡಬೇಕೆಂಬ ಉದ್ದೇಶವಿದೆ ಎಂದರು.
ಶಾಸಕ ತನ್ವೀರ್ ಸೇಠ್ ಅವರ ಮೇಲೆ ಹತ್ಯೆ ಯತ್ನ ನಡೆದಿದೆ. ಎಸ್ಡಿಪಿಐ ಸಂಘಟನೆ ಮೇಲೆ ಹಲವು ಆರೋಪಗಳಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಂಘಟನೆಗಳ ಮೇಲಿನ ಕೇಸ್ನ್ನು ವಾಪಸ್ ಪಡೆದಿದ್ದಾರೆ. ಈಗ ಅದಕ್ಕೆ ಬೆಲೆ ತೆರಬೇಕಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ. ರವಿ ಮಾತನಾಡಿ, ಕಾಂಗ್ರೆಸ್ ಒಂದು ಗುಂಪು ಎಸ್ಡಿಪಿಐ ಹಿಂದಿದೆ ಎಂದು ಆರೋಪಿಸಿದ ಅವರು, ಈ ಸಂಘಟನೆ ಬಗ್ಗೆ ಮೃದು ಧೋರಣೆ ಸರಿಯಲ್ಲ. ತನ್ವೀರ್ ಹತ್ಯೆ ಯತ್ನ ಹಿಂದೆ ಈ ಸಂಘಟನೆಯ ಕೈವಾಡವಿದ್ದರೆ ಅದು ಅಪಾಯಕಾರಿ ಎಂದರು.
ಸಂಘಟನೆ ನಿಷೇಧ ಮಾಡುವುದು ದೊಡ್ಡದಲ್ಲ. ಅತಂಹ ಸಂಘಟನೆ ಮತ್ತೊಂದು ಹುಟ್ಟಿ ಬರುತ್ತದೆ. ಆ ಸಂಘಟನೆಗೆ ಆರ್ಥಿಕ ಮೂಲ ಎಲ್ಲಿಂದ ಬರುತ್ತಿದೆ ಎಂಬುದು ಗೊತ್ತಾಗಬೇಕು ಎಂದರು.