ಜ್ಯೋತಿಷ್ಯ ವಿಜ್ಞಾನವೆಂದು ಸಾಬೀತಾಗಿರುವುದರಿಂದ ನಿಷೇಧ ಮಾಡುವುದಿಲ್ಲ: ಸಚಿವ ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.24-ಜ್ಯೋತಿಷ್ಯ ವಿಜ್ಞಾನವೆಂದು ಸಾಬೀತಾಗಿರುವುದರಿಂದ ನಿಷೇಧ ಮಾಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ವಿಧಾನಸೌಧದಲ್ಲಿಂದು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞಾ ವಿಧಿ ಬೋಧಿಸಿದ ನಂತರ ಮಾತನಾಡಿದ ಅವರು, ನಕಲಿ ಜ್ಯೋತಿಷಿಗಳು ಜ್ಯೋತಿಷ್ಯದ ಹೆಸರಿನಲ್ಲಿ ಹಣ ವಸೂಲಿ ಮಾಡುವವರು ಹಾಗೂ ಜನರನ್ನು ತಪ್ಪು ದಾರಿಗೆ ಎಳೆಯುವವರ ಬಗ್ಗೆ ಬಹಳಷ್ಟು ದೂರುಗಳು ಬಂದಿದ್ದು ಈ ಬಗ್ಗೆ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ ಎಂದರು.

ಜ್ಯೋತಿಷ್ಯ ಕೇಳುವುದರಲ್ಲಿ ಜೆಡಿಎಸ್, ಕಾಂಗ್ರೆಸ್‍ನವರೇ ಹೆಚ್ಚು ನಿಪುಣರು. ಜ್ಯೋತಿಷಿಗಳ ಮನೆ ಬಾಗಿಲಿಗೆ ನಿರಂತರವಾಗಿ ಹೋಗುವವರು ಕಾಂಗ್ರೆಸ್, ಜೆಡಿಎಸ್‍ನವರಾಗಿದ್ದಾರೆ. ಹೀಗಾಗಿ ಜ್ಯೋತಿಷ್ಯ ರದ್ದು ಮಾಡುವುದಿಲ್ಲ ಎಂದರು.ಮೌಢ್ಯ  ನಿಷೇಧಕ್ಕೆ ಬೆಂಬಲವಿದೆ. ಎಲ್ಲಾ ಧರ್ಮದಲ್ಲಿರುವ ಮೌಢ್ಯಗಳು ನಿಷೇಧವಾಗಬೇಕು. ಜನರಿಗೆ ಹಿಂಸೆ ನೀಡುವಂತಹ ಮೌಢ್ಯಗಳು ಯಾವುದೇ ಧರ್ಮದಲ್ಲಿದ್ದರೂ ಆಚರಿಸುವಂತಹುದಲ್ಲ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಮೌಢ್ಯ ನಿಷೇಧ ಮಾಡಲು ಮುಂದಾದ ಸಂದರ್ಭದಲ್ಲಿ ಧರ್ಮದ ವಿಚಾರ ಪ್ರಸ್ತಾಪಿಸಿದ್ದರಿಂದ ವಿರೋಧಿಸಿದ್ದೆವು. ಆದರೆ ಮಕ್ಕಳನ್ನು ಮುಳ್ಳಿನ ಎಸೆಯುವಂತಹ ಮೌಢ್ಯಗಳ ನಿಷೇಧಕ್ಕೆ ಬೆಂಬಲವಿದೆ ಎಂದು ಸಮರ್ಥಿಸಿಕೊಂಡರು.

ಮುಖ್ಯಮಂತ್ರಿಗಳೊಂದಿಗೆ ಚರ್ಚೆ:
ಭೂ ಪರಿವರ್ತನೆಯಾಗದ, ಯೋಜನಾ ಮಂಜೂರಾತಿ ಇಲ್ಲದ ಕಂದಾಯ ನಿವೇಶನಗಳ ನೋಂದಣಿಯನ್ನು ನಿಲ್ಲಿಸಲಾಗಿದೆ. ಇದರಿಂದ ಸಾರ್ವಜನಿಕರಿಗಾಗುತ್ತಿರುವ ತೊಂದರೆಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸಮಾಲೋಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕಂದಾಯ ಇಲಾಖೆಯ ಕಾವೇರಿ ತಂತ್ರಾಂಶದಲ್ಲಿ ಭೂ ಪರಿವರ್ತನೆಯಾಗದ, ಯೋಜನಾ ಮಂಜೂರಾತಿ ಇಲ್ಲದ ಕಂದಾಯ ನಿವೇಶನಗಳ ನೋಂದಣಿಗೆ ಅವಕಾಶವಿಲ್ಲ. ಕೆಲವೆಡೆ ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡುವ ಪ್ರಯತ್ನಗಳು ನಡೆದಿವೆ. 10 ನಿವೇಶನಗಳನ್ನು, 20 ನಿವೇಶಗಳನ್ನಾಗಿ ಮಾರಾಟ ಮಾಡುವ, ಯಾರದೋ ನಿವೇಶನವನ್ನು ಮತ್ತ್ಯಾರೋ ಮಾರಾಟ ಮಾಡುವಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಕಂದಾಯ ನಿವೇಶನಗಳ ನೋಂದಣಿ ಸ್ಥಗಿತಗೊಳಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಪ್ರತಿಜ್ಞಾ ವಿಧಿ ಬೋಧಿಸಿದ ಸಂದರ್ಭದಲ್ಲಿ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Facebook Comments