ಶೀಘ್ರದಲ್ಲೇ ಸಂಪುಟ ವಿಸ್ತರಣೆ: ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.24-ರಾಜ್ಯ ಸಚಿವ ಸಂಪುಟ ಶೀಘ್ರದಲ್ಲೇ ವಿಸ್ತರಣೆಯಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಿದೇಶ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಕ್ಕೆ ಮರಳಿದ ನಂತರ ಬಿಜೆಪಿ ನೂತನ ಅಧ್ಯಕ್ಷರೊಂದಿಗೆ ಸಮಾಲೋಚಿಸಿ ಶೀಘ್ರವೇ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಕೊಟ್ಟಿರುವ ಮಾತುಗಳನ್ನು ನಡೆಸಿಕೊಡಲು ಬದ್ಧವಾಗಿದ್ದೇವೆ ಎಂದರು.

ಮೈತ್ರಿ ಸರ್ಕಾರ ಪತನ, ಬಿಜೆಪಿ ಸರ್ಕಾರ ರಚನೆ, ವಿಧಾನಸಭೆ ಉಪಚುನಾವಣೆ ಫಲಿತಾಂಶ ಸೇರಿದಂತೆ ರಾಜ್ಯದ ಎಲ್ಲ ಬೆಳವಣಿಗೆಗಳೂ ಬಿಜೆಪಿ ಹೈಕಮಾಂಡ್ ಗಮನಕ್ಕೆ ಬಂದಿವೆ. ಯಾವುದೇ ರೀತಿಯ ಗೊಂದಲವಿಲ್ಲ. ಹೀಗಾಗಿ ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅಶೋಕ್ ಆ ಬಗ್ಗೆ ಚರ್ಚಿಸಲು ತಾವು ಚಿಕ್ಕವರು ಎಂದರು.

ಡಿಸಿ ಬದಲು ಕಲೆಕ್ಟರ್: ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಜಿಲ್ಲಾಧಿಕಾರಿಗಳನ್ನು ಕಲೆಕ್ಟರ್ ಎಂದು ಕರೆಯಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ಜಿಲ್ಲಾಧಿಕಾರಿಗಳನ್ನು ಕಲೆಕ್ಟರ್‍ನ್ನಾಗಿ ಕರೆಯುವ ಬಗ್ಗೆ ಚಿಂತನೆ ನಡೆದಿದೆ. ಆದಾಯ ತೆರಿಗೆ , ಮಾರಾಟ ತೆರಿಗೆ , ಸಾರಿಗೆ ತೆರಿಗೆ ಇಲಾಖೆಯಲ್ಲಿ ಡಿಸಿ ಹುದ್ದೆಗಳಿವೆ.

ಜಿಲ್ಲಾಧಿಕಾರಿಗಳನ್ನು ಡೆಪ್ಯೂಟಿ ಕಮೀಷನರ್ ಅಥವಾ ಡಿಸಿ ಎಂದು ಕರೆಯುವುದರಿಂದ ವ್ಯತ್ಯಾಸ ಕಾಣುತ್ತಿಲ್ಲ. ಕೇಂದ್ರ ಸರ್ಕಾರದ ಸಭೆಗಳಲ್ಲಿ ಜಿಲ್ಲಾಧಿಕಾರಿಗಳು ಪಾಲ್ಗೊಂಡಾಗ ಕೆಲವು ರಾಜ್ಯದವರು ಕಲೆಕ್ಟರ್ ಆಗಿ ಪಾಲ್ಗೊಂಡಿದ್ದರೆ, ನಮ್ಮ ರಾಜ್ಯದವರು ಡೆಪ್ಯೂಟಿ ಕಮೀಷನರ್ ಆಗಿ ಪಾಲ್ಗೊಳ್ಳುತ್ತಾರೆ. ಅಂತಹ ಕಡೆ ಗೊಂದಲ ಉಂಟಾಗುತ್ತದೆ  ಎಂಬ ಅಭಿಪ್ರಾಯವಿದೆ. ಇದರ ಸಾಧಕ-ಬಾಧಕಗಳ ಬಗ್ಗೆ ವರದಿ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗು ವುದು ಎಂದರು.

ಕಂದಾಯ ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ಅನ್ಯ ಭಾಷಾ ಶಬ್ಧಗಳಿಗೆ ಪರ್ಯಾಯವಾಗಿ ಕನ್ನಡ ಶಬ್ಧ ಬಳಕೆಗೆ ಆದ್ಯತೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

Facebook Comments