ಹೊಸ ಸಚಿವರೊಂದಿಗೆ ಅಧಿವೇಶನದಲ್ಲಿ ವಿರೋಧ ಪಕ್ಷವನ್ನು ಎದುರಿಸಲು ಸಿದ್ದ : ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.6-ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಮುಂಬರುವ ಅಧಿವೇಶನದಲ್ಲಿ ವಿರೋಧ ಪಕ್ಷದವರನ್ನು ಸಮರ್ಥವಾಗಿ ಎದುರಿಸಲು ನಮಗೆ ನೈತಿಕ ಬಲ ಬಂದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ರಾಜಭವನದಲ್ಲಿ ಸಚಿವ ಸಂಪುಟ ವಿಸ್ತರಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದಲ್ಲೇ ಅಧಿವೇಶನ ಆರಂಭವಾಗಲಿದೆ.

ಇಂದು ಸಂಪುಟಕ್ಕೆ ಹತ್ತು ಸಚಿವರು ಮಾತ್ರ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ ಎಂದರು. ಯಾವುದೇ ಶಾಸಕರಿಗೆ ಅಸಮಾಧಾನ ಇಲ್ಲವೇ ಇಲ್ಲ. ಕೆಲವು ಸಂದರ್ಭಗಳಲ್ಲಿ ಸಚಿವ ಸ್ಥಾನ ಸಿಗದೆ ಅವಕಾಶ ವಂಚಿತರು ಅಸಮಾಧಾನಗೊಳ್ಳುವುದು ಸಹಜ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ವರಿಷ್ಠರು ಅದನ್ನು ಪರಿಹರಿಸಲು ಸಮರ್ಥರಾಗಿದ್ದಾರೆ ಎಂದು ಹೇಳಿದರು.

ಸಂಪುಟ ವಿಸ್ತರಣೆಯಾಗಿಲ್ಲ ಎಂದು ವಿರೋಧ ಪಕ್ಷದವರು ಕುಹಕವಾಡುತ್ತಿದ್ದರು. ಈಗ ನಾಲ್ಕೈದು ಸ್ಥಾನಗಳನ್ನು ಹೊರತುಪಡಿಸಿ ಎಲ್ಲ ಸ್ಥಾನಗಳು ಭರ್ತಿಯಾಗಿವೆ ಎಂದು ತಿಳಿಸಿದರು.
ಯಾವುದೇ ಶಾಸಕರು ಪಕ್ಷದ ವರಿಷ್ಠರ ತೀರ್ಮಾನವನ್ನು ಪ್ರಶ್ನೆ ಮಾಡುತ್ತಿಲ್ಲ. ಆಕಾಂಕ್ಷಿಗಳು ತಮಗೆ ಅವಕಾಶ ಕೈ ತಪ್ಪಿತ್ತಲ್ಲ ಎಂದು ಬೇಸರಗೊಂಡಿರಬಹುದು. ಎಲ್ಲರಿಗೂ ಅವಕಾಶ ಸಿಗುತ್ತದೆ ತಾಳ್ಮೆಯಿಂದ ಇರಬೇಕು ಎಂದು ಅಶೋಕ್ ಮನವಿ ಮಾಡಿದರು.

Facebook Comments