ರಾಜ್ಯದಲ್ಲಿ ತೋಟಗಾರಿಕೆ ಬೆಳೆ ಹೆಚ್ಚಿಸಲು ವಿಜ್ಞಾನಿಗಳು ಪಣ ತೊಡಲಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ರಾಜ್ಯ 8ನೇ ಸ್ಥಾನದಲ್ಲಿದ್ದು, ಅದನ್ನು 2 ಅಥವಾ 3ನೇ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳು ಪ್ರಯತ್ನಿಸಬೇಕು ಎಂದು ತೋಟಗಾರಿಕೆ ಸಚಿವ ಆರ್.ಶಂಕರ್ ಸಲಹೆ ಮಾಡಿದರು. ಹೆಸರುಘಟ್ಟದಲ್ಲಿನ ತೋಟಗಾರಿಕಾ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಕೂಡ ಆಧುನಿಕ ಬೇಸಾಯ ಕ್ರಮಗಳನ್ನು ಅನುಸರಿಸುವ ಮೂಲಕ ಉತ್ಪಾದನೆಯನ್ನು ಹೆಚ್ಚಿಸಬೇಕು.

ಉತ್ಪಾದನೆ ಹೆಚ್ಚಾದರೆ ಆದಾಯ ಹೆಚ್ಚಾಗಲಿದೆ. ಹಲವು ಸಮಸ್ಯೆಗಳ ನಡುವೆ ರೈತರು ಬದುಕುವಂತಾಗಿದೆ. ಹೊಸ ಸಂಶೋಧನೆ, ತಂತ್ರಜ್ಞಾನಗಳ ಫಲ ರೈತರಿಗೂ ತಲುಪಬೇಕು. ಬೆಳೆಗಳ ಸಂಸ್ಕರಣೆ, ಮಾರುಕಟ್ಟೆ, ಜ್ಞಾಲ್ಯವರ್ಧನೆಗೂ ಆದ್ಯತೆ ಸಿಗಬೇಕು ಎಂದರು. ಬಹಳಷ್ಟು ಕಂಪನಿಗಳು ಮುಂದೆ ಬಂದಿದ್ದು ಇದರಿಂದ ರೈತರಿಗೆ, ಗ್ರಾಹಕರಿಗೆ ಅನುಕೂಲವಾಗುವಂತಹ ಕೆಲಸವಾಗಬೇಕು. ವಿಜ್ಞಾನಿಗಳು ಹೊಸ ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಬೇಕು. ಹೊಸ ಸೀಬೆ ತಳಿಯನ್ನು ಅಭಿವೃದ್ಧಿಪಡಿಸಿದ್ದು ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತೋಟಗಾರಿಕಾ ಮೇಳ ವೀಕ್ಷಣೆಗೆ ತಮಿಳುನಾಡು, ಉತ್ತರಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಆಗಮಿಸಿದ್ದಾರೆ. ಹಣ್ಣು ಮತ್ತು ತರಕಾರಿಗಳ ತಾಜಾತನ ಕಾಪಾಡಿಕೊಂಡು ಸಾಗಾಣಿಕೆ ಮಾಡುವಂತಹ ವಾಹನಗಳ ಪ್ರದರ್ಶನವೂ ಮಾಡಲಾಗಿದೆ. ಇದರ ಸದ್ಭಳಕೆಯಾಗಬೇಕು. ರೇಷ್ಮೆ ಹುಳು ಸಾಕಲು ಈಗ ದಿನಕ್ಕೆ ಎರಡು ಸೊಪ್ಪು ಕೊಡುವ ಪದ್ಧತಿಯಿದೆ. ಅದನ್ನು ಒಂದು ಬಾರಿ ಮಾತ್ರ ಸೊಪ್ಪು ನೀಡುವ ಪದ್ಧತಿಯ ಬಗ್ಗೆ ಸಂಶೋಧನೆಯಾಗುತ್ತದೆ ಎಂದು ಹೇಳಿದರು.

Facebook Comments