10 ದಿನದಲ್ಲಿ ಕಬ್ಬು ಬೆಳೆಗಾರರ ಬಾಕಿ ಪಾವತಿ : ರೈತರಿಗೆ ಸಚಿವ ಸಿ.ಟಿ.ರವಿ ಭರವಸೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.17-ಸಕ್ಕರೆ ಕಾರ್ಖಾನೆ ಮಾಲೀಕರಿಂದ ಬಾಕಿ ಉಳಿಸಿಕೊಂಡಿರುವ ಕಬ್ಬು ಬೆಳೆಗಾರರ ಹಣವನ್ನು ಹತ್ತು ದಿನದೊಳಗೆ ಕೊಡಿಸುವುದಾಗಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
2018-19ನೇ ಸಾಲಿನಲ್ಲಿ ಶೇ. 0.5ರಷ್ಟು ಮಾತ್ರ ಹಣ ಬಾಕಿ ಇದೆ.

ಹತ್ತು ದಿನದೊಳಗೆ ಪೂರ್ಣಮಟ್ಟದಲ್ಲಿ ಬಿಡುಗಡೆ ಮಾಡಲಾಗುವುದು, ದೇಶದಲ್ಲಿ ಎಫ್‍ಆರ್‍ಪಿ ಪ್ರಕಾರ ರೈತರಿಗೆ ಪೂರ್ಣಮಟ್ಟದಲ್ಲಿ ಹಣ ಬಿಡುಗಡೆ ಮಾಡಿದ ಮೊದಲ ರಾಜ್ಯ ಎಂಬ ಹೆಮ್ಮೆಗೆ ಕರ್ನಾಟಕ ಪಾತ್ರವಾಗುತ್ತದೆ ಎಂದರು.

ನಗರದ ಖಾಸಗಿ ಅತಿಥಿ ಗೃಹದಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ ಹಾಗೂ ರೈತ ಸಂಘಟನೆಗಳ ಜತೆ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಎಫ್‍ಆರ್‍ಪಿ ಪ್ರಕಾರ 2018-19ರಲ್ಲಿ ರೈತರಿಗೆ 11,948 ಕೋಟಿ ಪಾವತಿಸಬೇಕಿತ್ತು. ಇದರಲ್ಲಿ ನಿನ್ನೆಗೆ 84 ಕೋಟಿ ಮಾತ್ರ ಬಾಕಿ ಇದೆ. ಅಂದರೆ ಶೇ. 99.5ರಷ್ಟು ಬಾಕಿ ಈಗಾಗಲೇ ಪಾವತಿಯಾಗಿದೆ ಎಂದರು.

ಉತ್ತರಪ್ರದೇಶದ ಶೇ. 15, ಮಹಾರಾಷ್ಟ್ರ ಶೇ. 5, ತಮಿಳುನಾಡು ಶೇ. 30, ಆಂಧ್ರಪ್ರದೇಶ ಶೇ. 25, ಕರ್ನಾಟಕದಲ್ಲಿ ಶೇ. 0.5ರಷ್ಟು ಬಾಕಿ ಇದೆ ಎಂದು ವಿವರಿಸಿದರು.

Facebook Comments