ಚೀನಾದ ಎಲೆಕ್ಟ್ರಿಕ್ ಸಾಧನಗಳ ಮೇಲೆ ಹದ್ದಿನ ಕಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.28- ಪೂರ್ವ ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ನಂತರ ಚೀನಾಗೆ ಆರ್ಥಿಕ ಹೊಡೆತ ನೀಡಲು ಸಜ್ಜಾಗಿರುವ ಕೇಂದ್ರ ಸರ್ಕಾರ ಆ ದೇಶದಿಂದ ಭಾರತಕ್ಕೆ ಬರುವ ಉತ್ಪನ್ನಗಳ ಮೇಲೆ ಹದ್ದಿನ ಕಣ್ಣಿನ ನಿಗಾ ಇಟ್ಟಿದೆ.

ಚೀನಾದಿಂದ ಭಾರತಕ್ಕೆ ಬರುವ ಉತ್ಪನ್ನಗಳ ಮೇಲೆ ಅಧಿಕ ಸುಂಕ ವಿಧಿಸುವ ಜತೆಗೆ ಚೀನಿ ಸರಕುಗಳ ಗುಣಮಟ್ಟವನ್ನು ಕೂಲಂಕಶವಾಗಿ ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಇಂಧನ ಖಾತೆ ಸಚಿವ ಆರ್.ಕೆ.ಸಿಂಗ್ ತಿಳಿಸಿದ್ದಾರೆ.

ವಿದ್ಯುತ್ ಉತ್ಪಾದನಾ ವಲಯದಲ್ಲಿ ವಿಶೇಷವಾಗಿ ಬಳಸಲಾಗುವ ಚೀನಾದ ಎಲೆಕ್ಟ್ರಿಕಲ್ ಸಾಧನ ಮತ್ತು ಉಪಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ.

ಆ ಉತ್ಪನ್ನಗಳ ಮೂಲಕ ಮಾಲ್ವೇರ್ ಅಥವಾ ಕಂಪ್ಯೂಟರ್ ವೈರಸ್ ಸಾಧ್ಯತೆ ಬಗ್ಗೆ ನಿಗಾ ವಹಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಪವರ್ ಗ್ರಿಡ್‍ಗಳಲ್ಲಿ ಚೀನಾದ ಎಲೆಕ್ಟ್ರಿಕ್ ಸಾಧನಗಳನ್ನು ಬಳಸಲಾಗುತ್ತಿದೆ.

ಮಾಲ್ವೇರ್ ಅಥವಾ ಟ್ರೋಜೋನ್ ಹಾರ್ಸ್ ಮೂಲಕ ವಿದ್ಯುತ್ ಉತ್ಪಾದನೆ ಕುಸಿತವಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಇನ್ನು ಮುಂದೆ ಚೀನಾದಿಂದ ಬರುವ ಅಗತ್ಯ ಸರಕುಗಳ ಗುಣಮಟ್ಟದ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಕ್ವಾಲಿಟಿ ಕಂಟ್ರೋಲ್‍ಗೆ ಆದ್ಯತೆ ನೀಡಲಾಗುತ್ತದೆ. ಚೀನಾದ ಕಳಪೆ ವಸ್ತುಗಳಿಗೆ ನಮ್ಮಲ್ಲಿ ಆಸ್ಪದ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಭಾರತವು ಮೇಕ್ ಇನ್ ಇಂಡಿಯಾ ಮೂಲಕ ಸಂಪೂರ್ಣ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಚೀನಾದ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸಲಾಗುತ್ತದೆ.

ಈ ಮೂಲಕ ದೇಶೀಯ ಉತ್ಪನ್ನಗಳ ತಯಾರಿಕೆಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ ಎಂದು ಆರ್.ಕೆ.ಸಿಂಗ್ ತಿಳಿಸಿದರು.
ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಇಲಾಖೆಯು ಆಗಸ್ಟ್ 1ರಿಂದ ಸೌರಶಕ್ತಿ ಸಾಧನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಪ್ರಸ್ತಾವನೆ ಹೊಂದಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಅವರು ತಿಳಿಸಿದರು.

Facebook Comments