ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಮಯ ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.8 – ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಮಯ ವಿಸ್ತರಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.  ಕೋವಿಡ್-19/ ಕೊರೋನಾ ವೈರಾಣು ಸೋಂಕು ಹರಡದಂತೆ ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ಹಿನ್ನೆಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಗೆ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ರೈತರ ಸಮಸ್ಯೆಗಳನ್ನ ಆಲಿಸಿ ಅವರು ಮಾತನಾಡಿದರು.

ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ನಿಗದಿಪಡಿಸಿದ್ದ ಸಮಯವನ್ನು ಮುಂಜಾನೆ 4 ರಿಂದ ಬೆಳಿಗ್ಗೆ 6 ಗಂಟೆಗೆ ಇದ್ದ ಸಮಯವನ್ನು, ಮುಂಜಾನೆ 4 ಗಂಟೆಯಿಂದ ಬೆಳಗ್ಗೆ 10 ವಿಸ್ತರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ರೈತರ ಉತ್ಪನ್ನಗಳ ಸಾಗಾಟಕ್ಕೆ ಯಾವುದೇ ರೀತಿಯ ತಡೆ ಇಲ್ಲ. ಚೆಕ್ ಪೋಸ್ಟ್ ನಲ್ಲಿ ಕೃಷಿ  ಉತ್ಪನ್ನಗಳ ಸಾಗಾಟಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು. ಹಸಿವಿನಿಂದ ಯಾರು ಬಳಲಬಾರದೆಂಬ ಕಾರಣಕ್ಕೆ ಕಾರ್ಮಿಕರಿಗೆ 750 ರೂಪಾಯಿ ಮೌಲ್ಯದ ಆಹಾರದ ಪೊಟ್ಟಣಗಳನ್ನು ವಿತರಣೆ ಮಾಡಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 20 ಸಾವಿರ ಆಹಾರದ ಪೊಟ್ಟಣಗಳನ್ನು ಕಳಿಸಲಾಗಿದೆ ಎಂದು ಹೇಳಿದರು. ಪಡಿತರ ವಿತರಣೆಯನ್ನು ಸರ್ಕಾರ ಉಚಿತವಾಗಿ ಮಾಡುತ್ತಿದ್ದು, ಕೆಲವು ಕಡೇ ಹಣ ತೆಗೆದುಕೊಳ್ಳುವ ಬಗ್ಗೆ ದೂರು ಬಂದಿದ್ದು ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದೆಂದು ಹೇಳಿದರು.

ನಂತರ ಸಹಕಾರ ಸಚಿವರು ದೊಡ್ಡಬಳ್ಳಾಪುರ ಬಸ್ ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಶುಚಿತ್ವ, ನೀರು ಹಾಗೂ ಆಹಾರ ಧಾನ್ಯಗಳನ್ನು ಪರಿಶೀಲಿಸಿದರು. ಬಳಿಕ ಲಾಕ್ ಡೌನ್ ಹಿನ್ನೆಲೆ ವಲಸೆ ಕಾರ್ಮಿಕರಿಗೆ ತಾತ್ಕಾಲಿಕವಾಗಿ‌ ಆಶ್ರಯ ಕಲ್ಪಿಸಲಾಗಿರುವ ದೊಡ್ಡಬಳ್ಳಾಪುರದ ಭುವನೇಶ್ವರಿ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ‌ ಸಚಿವರು ಕಾರ್ಮಿಕರಿಗೆ ಹಣ್ಣು ವಿತರಿಸಿದರು.

ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಕೃಷಿ ಮಾರಾಟ ಇಲಾಖೆ ನಿರ್ದೇಶಕ ಕರೀಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ದೊಡ್ಡಬಳ್ಳಾಪುರ ತಾಲ್ಲೂಕು ತಹಶೀಲ್ದಾರ್ ಶಿವರಾಜು, ದೊಡ್ಡಬಳ್ಳಾಪುರ ನಗರಸಭೆ ಮುಖ್ಯಾಧಿಕಾರಿ ಮಂಜುನಾಥ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin