ಕಂಪ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದೆ : ಸಚಿವ ಶಂಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.17- ಕಂಪ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಈಗಾಗಲೇ ಖಾಸಗಿಯವರಿಗೆ ಮಾರಾಟ ಮಾಡಿರುವುದರಿಂದ ಕಾರ್ಖಾನೆ ಸ್ಥಗಿತಗೊಂಡಿದೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಜೆ.ಎನ್.ಗಣೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಂಪ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯು 1955ರಲ್ಲಿ ನೋಂದಣಿಯಾಗಿ 1958ರಿಂದ ಪ್ರಾರಂಭವಾಗಿದೆ.

176.51 ಎಕರೆ ಜಮೀನು ಹೊಂದಿದೆ. ಕಾರ್ಖಾನೆ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಸಮಾಪನೆಗೊಳಿಸಿ ಸಮಾಪನ ಅಧಿಕಾರಿಗಳನ್ನು ನೇಮಿಸಲಾಗಿದೆ. ಸುಂದರಿ ಶುಗರ್ಸ್ ಕಂಪನಿಗೆ ಮಾರಾಟ ಮಾಡಲಾಗಿದೆ. ಮಾರಾಟದ ಕರಾರಿನಲ್ಲಿ ಖರೀದಿದಾರರು ಸ್ಥಳದಲ್ಲೇ ಕಾರ್ಖಾನೆ ನಡೆಸಬೇಕೆಂಬ ನಿಬಂಧನೆ ಇದೆ. ಆದರೂ ಕಬ್ಬು ಅರೆಯುವ ಕಾರ್ಯವನ್ನು ನಿರ್ವಹಿಸಿಲ್ಲ.

ಯಂತ್ರೋಪಕರಣಗಳನ್ನು ಮಾರಾಟ ಮಾಡಿಕೊಂಡಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು. ಹೀಗಾಗಿ ಕಾರ್ಖಾನೆಯ ಜಮೀನು ಮಾರಾಟ ಒಪ್ಪಂದವನ್ನು ರದ್ದುಪಡಿಸಿ ಕಾರ್ಖಾನೆ ಪುನಶ್ಚೇತನಗೊಳಿಸುವಂತೆ ಆಗ್ರಹಿಸಿ ವಿವಿಧ ಮಠಾಧೀಶರು ಪಾದಯಾತ್ರೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದರು ಎಂದರು. ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಅನುಮತಿ ಕೊಟ್ಟ ನಂತರ ಸಮಸ್ಯೆ ಬಗೆಹರಿಯಲಿದೆ ಎಂದರು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Facebook Comments