ರಾಜ್ಯದ 14 ಲಕ್ಷ ಕಟ್ಟಡ ಕಾರ್ಮಿಕರಿಗೆ 800 ಕೋಟಿ ಸಹಾಯಧನ ವಿತರಣೆ : ಸಚಿವ ಶಿವರಾಮ್ ಹೆಬ್ಬಾರ್

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರ ಸಂಕಷ್ಟಕ್ಕೆ ನೆರವಾಗಿರುವ ಸರ್ಕಾರ ಇದುವರೆಗೆ 14 ಲಕ್ಷ ಕಟ್ಟಡ ಕಾರ್ಮಿಕರಿಗೆ 800 ಕೋಟಿ ರೂ ಸಹಾಯಧನ ವಿತರಿಸಿದೆ ಎಂದು ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಹುತೇಕ ಕಟ್ಟಡ ಕಾರ್ಮಿಕರ ಬಳಿ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಮಾಹಿತಿ ಇಲ್ಲದ ಕಾರಣ ಸಮಯಕ್ಕೆ ಸರಿಯಾಗಿ ಸಹಾಯಧನ ವಿತರಣೆ ವಿಳಂಬವಾಗಿದೆ. ಇನ್ನೊಂದು ವಾರದಲ್ಲಿ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸಹಾಯಧನ ತಲುಪಲಿದೆ ಎಂದು ಹೇಳಿದರು.

ಹಾಸನ ಜಿಲ್ಲೆಯಲ್ಲಿ 1572 ಮಂದಿ ಕ್ಷೌರಿಕರು ಹಾಗೂ 2630 ಅಗಸರು ಸಹಾಯಧನಕ್ಕೆ ನೊಂದಣಿ ಮಾಡಿಕೊಂಡಿದ್ದು ಇನ್ನೊಂದು ವಾರದಲ್ಲಿ ಅವರಿಗೆ ಸಹಾಯಧನ ಪಾವತಿ ಮಾಡಲಾಗುವುದು ಎಂದು ಹೇಳಿದವರು . ಜಿಲ್ಲೆಯ 25 ಸಾವಿರ ಮಂದಿಗೆ ನರೇಗಾ ಯೋಜನೆಯಡಿ 45 ಕೋಟಿ ಹಣ ಪಾವತಿಸಲಾಗುತ್ತಿದೆ .

ರಾಜ್ಯ ಸರ್ಕಾರದ ಬಳಿ ಯಾವುದೇ ಹಣದ ಕೊರತೆ ಇಲ್ಲ ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ತನ್ನ ಕೈಲಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ . ಸರ್ಕಾರದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಕಾರಣ ಲಾಕ್ಡೌನ್ ಹಿನ್ನಲೆಯಲ್ಲಿ ಯಾವುದೇ ಕಂದಾಯವನ್ನು ಸಹ ಸರ್ಕಾರ ಸಂಗ್ರಹಿಸಿಲ್ಲ ಎಂದರು.

ರಾಜ್ಯದಲ್ಲಿ 65 ಸಕ್ಕರೆ ಕಾರ್ಖಾನೆಗಳಿದ್ದು ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಶೇಕಡ 96.5 ರಷ್ಟು ಹಣ ಈಗಾಗಲೇ ಪಾವತಿ ಮಾಡಲಾಗಿದೆ. ಇನ್ನುಳಿದ ಹಣವನ್ನು ಶೀಘ್ರದಲ್ಲಿಯೇ ಪಾವತಿ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದರು.

ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಒಡೆತನದ ಕಂಪನಿಗೆ 40ವರ್ಷ ಲೀಸ್ ಗೆ ನೀಡಲಾಗುತ್ತಿದೆ ಹಾಗೂ ರಾಜ್ಯದ ಇತರೆ ಸಕ್ಕರೆ ಕಾರ್ಖಾನೆಗಳನ್ನು ಸಹ 40ವರ್ಷ ಲೀಸ್ ಗೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಮಂಡ್ಯದ ಮೈಶುಗರ್ ಕಾರ್ಖಾನೆಯ ಆಸ್ತಿಯನ್ನು ಹಲವು ಮಂದಿ ಕಬಳಿಸಿದ್ದಾರೆ ಕಾರ್ಖಾನೆಯ ಆಸ್ತಿಯನ್ನು ಮರು ಸರ್ವೆ ಮಾಡಿ ಎಷ್ಟೇ ಪ್ರಭಾವಿಗಳಾಗಿದ್ದರೂ ಕಬಳಿಸಿರುವ ಭೂಮಿಯನ್ನು ವಶಕ್ಕೆ ಪಡೆಯುವಂತೆ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದರು.

ಮೈಶುಗರ್ ಕಾರ್ಖಾನೆಯ ಸಿಬ್ಬಂದಿಗಳಿಗೆ ವಿ ಆರ್ ಎಸ್ ನೀಡಲಾಗುತ್ತಿದೆ ಹಾಗೂ ಮುಂದಿನ ಒಂದು ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಮೈ ಶುಗರ್ ಕಾರ್ಖಾನೆಗೆ ಸಂಬಂಧಿಸಿದಂತೆ 2300 ಕೋಟಿ ಮೀಸಲಿಡಲಾಗಿದೆ ಎಂದರು .

ಮಂಡ್ಯ ಜಿಲ್ಲೆಯ ಪ್ರಮುಖ ಕಾರ್ಖಾನೆ ಯಾದ ಮೈಶುಗರ್ ಕಾರ್ಖಾನೆಯನ್ನು ಆದಷ್ಟು ಶೀಘ್ರ ಪ್ರಾರಂಭಿಸಬೇಕೆಂದು ಮುಖ್ಯಮಂತ್ರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಅಲ್ಲದೆ ಲೋಕಸಭಾ ಸದಸ್ಯರಾದ ಸುಮಲತಾ ಅವರು ಒತ್ತಡ ಹೇರಿದ್ದು ಆದಷ್ಟು ಶೀಘ್ರ ಕಾರ್ಖಾನೆ ಪ್ರಾರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ಕಾರ್ಮಿಕರ ಶೋಷಣೆ ಹಾಗೂ ಇತರೆ ಆರೋಪದಡಿ 90 ಕಾರ್ಖಾನೆಗಳ ವಿರುದ್ಧ ಕಾರ್ಮಿಕ ಇಲಾಖೆಯಲ್ಲಿ ವಿಚಾರಣೆ ನಡೆಯುತ್ತಿದೆ . ಇಂದಿನ ಸ್ಥಿತಿಯಲ್ಲಿ ಕಾರ್ಮಿಕರು ಮತ್ತು ಮಾಲೀಕರನ್ನು ಕೂರಿಸಿ ಸಂಧಾನ ಪ್ರಕ್ರಿಯೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ . ಇಲ್ಲವಾದಲ್ಲಿ ಕಾರ್ಖಾನೆ ಮಾಲೀಕರು ಹಾಗೂ ಕಾರ್ಮಿಕರಿಗೆ ಹೆಚ್ಚು ತೊಂದರೆಯಾಗಲಿದೆ ಎಂದು ಸಚಿವರು ಹೇಳಿದರು.

ಮಾಧ್ಯಮಗಳು ಕೊರೋನಾ ಹಾವಳಿಯಂತಹ ಸಂಕಷ್ಟ ಸಂದರ್ಭದಲ್ಲಿ ಜನರಿಗೆ ಭಯ ಪಡಿಸುವಂತಹ ಸುದ್ದಿಗಳನ್ನು ಬಿತ್ತರಿಸುವ ಬದಲು ಎಚ್ಚರಿಕೆ ಹಾಗೂ ಜಾಗೃತರಾಗಿರುವಂತೆ ಸಲಹೆಗಳನ್ನು ಬಿತ್ತರಿಸಬೇಕು ಎಂದು ಮನವಿ ಮಾಡಿದರು.

ಚನ್ನರಾಯಪಟ್ಟಣದ ಸಕ್ಕರೆ ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿ ಹಾಗಿರುವ ಹಾನಿ ಸಂಬಂಧ ಕುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಗುತ್ತಿದ್ದು ಆದಷ್ಟು ಶೀಘ್ರವಾಗಿ ಕಾರ್ಖಾನೆ ಪ್ರಾರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಇದೇವೇಳೆ ತಿಳಿಸಿದರು .

ಈ ವೇಳೆ ಶಾಸಕರಾದ ಪ್ರೀತಮ್ ಜೆ ಗೌಡ. ಎಂ.ಎ. ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಆರ್ ‌.ಗಿರೀಶ್. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ ,ಸೇರಿದಂತೆ ಇತರರು ಹಾಜರಿದ್ದರು

Facebook Comments

Sri Raghav

Admin