ಏಷ್ಯಾದಲ್ಲೇ ಮಾದರಿ ನಗರ ನಿರ್ಮಾಣದ ಗುರಿ : ಸೋಮಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಆನೇಕಲ್, ಜೂ.28 – ತಾಲ್ಲೂಕಿನ ಕಾಡುಜಕ್ಕನಹಳ್ಳಿ ಗ್ರಾಮದ ಬಳಿ ಸೂರ್ಯನಗರ 4ನೇ ಹಂತದಲ್ಲಿ 1938 ಎಕರೆ ಭೂ ಸ್ವಾಧೀನ ಮಾಡುವ ಗುರಿಯಿದ್ದು, ಹಾಲಿ 700 ಎಕರೆ ಪ್ರದೇಶದಲ್ಲಿ ಅಭಿವೃದ್ದಿ ಕಾರ್ಯವನ್ನು ಪ್ರಾರಂಭ ಮಾಡಲಿದ್ದೇವೆ.

10 ತಿಂಗಳಲ್ಲಿ ರೂ. 378 ಕೋಟಿ ಬಂಡವಾಳದೊಂದಿಗೆ ಏಷ್ಯಾಖಂಡದಲ್ಲೆ ಮಾದರಿಯಾಗುವಂತಹ ನಗರವನ್ನು ನಿರ್ಮಿಸಿ ಶ್ರೇಷ್ಠ ಬಡಾವಣೆಯನ್ನಾಗಿ ರೂಪಿಸಲಾಗುವುದು ಎಂದು ವಸತಿ ಸಚಿವ ಸೋಮಣ್ಣ ತಿಳಿಸಿದ್ದಾರೆ.

ಇದು ಮಧ್ಯಮ ವರ್ಗ ಹಾಗೂ ಕೆಳ ವರ್ಗದವರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನಗಳನ್ನು ಒದಗಿಸುವ ಯೋಜನೆಯಾಗಿದ್ದು ರೈತರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಕಾಡುಜಕ್ಕನಹಳ್ಳಿಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, 2012ರಲ್ಲಿ ತಾವು ವಸತಿ ಸಚಿವರಾಗಿದ್ದಾಗ ಕೈಗೆತ್ತಿಕೊಂಡ ಯೋಜನೆಯನ್ನು ಮತ್ತೆ ಈಗ ಯಡಿಯೂರಪ್ಪನವರ ಸರ್ಕಾರದಲ್ಲಿ ಮುಂದುವರಿಸಲು ನನಗೆ ಹೆಮ್ಮೆಯಾಗಿದೆ ಎಂದರು.

ಯಾವುದೇ ಕೆಲಸ ಮಾಡಲು ಇಚ್ಚಾಶಕ್ತಿ ಹಾಗೂ ಅನುಷ್ಠಾನ ಯುಕ್ತಿ ಎರಡೂ ಇರಬೇಕು. ಈ ನಗರಕ್ಕೆ ಪ್ರಧಾನ ಮಂತ್ರಿ ವಸತಿ ಬಡಾವಣೆÀ ಹೆಸರಿಡಲು ತೀರ್ಮಾನಿಸಿದ್ದು ಈಗಾಗಲೇ 17 ಸಹಸ್ರ ನಿವೇಶನಗಳಿಗೆ ಕರ್ನಾಟಕ ಗೃಹ ಮಂಡಳಿಗೆ ಬೇಡಿಕೆ ಬಂದಿದೆ. ಎಲ್ಲ ಆಧುನಿಕ ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತ ಬಡಾವಣೆಯನ್ನು ನಿರ್ಮಿಸುವ ಈ ಯೋಜನೆಯ ಅನುಷ್ಠಾನದಿಂದ ಕಾಡಂಚಿನ ಗ್ರಾಮಗಳಾದ ಕೋನಸಂದ್ರ, ಬೊಮ್ಮಂಡಹಳ್ಳಿ, ಕಾಡುಜಕ್ಕನಹಳ್ಳಿ, ಇಂಡ್ಲವಾಡಿ, ಬಗ್ಗನದೊಡ್ಡಿ ಸೇರಿದಂತೆ ಸುತತಿಮುತ್ತಲ ಗ್ರಾಮಸ್ಥರ ಬದುಕು, ಆರ್ಥಿಕ ವ್ಯವಸ್ಥೆಯ ಪರಂಪರೆಯೇ ಬದಲಾಗಲಿದೆ ಎಂದರು.

# ಶೇ. 50:50 ಅನುಪಾತ ಪ್ರಾರಂಭದಲ್ಲಿ ಜಮೀನು ಸ್ವಾಧೀನಕ್ಕೆ ನೀಡಿದ ರೈತರಿಗೆ ರೂ. 20 ಲಕ್ಷ ಹಾಗೂ ಬಡಾವಣೆ ಅಭಿವೃದ್ಧಿಗೊಂಡ ನಂತರ ರೂ. 10 ಲಕ್ಷ ನೀಡಲಾಗುವುದು. ಮಂಡಳಿಯ ಕರಾರಿನಂತೆ ಅಭಿವೃದ್ಧಿಪಡಿಸಿದ ನಿವೇಶನಗಳಲ್ಲಿ ಶೇ.50 ರಷ್ಟನ್ನು ರೈತರಿಗೆ ನೀಡಲಾಗುವುದು ಎಂದು ವಿವರಿಸಿದರು.

ರೈತರ ಹಕ್ಕು ಕಸಿಯಲ್ಲ : ಗೃಹ ಮಂಡಳಿಯ ಕರಾರಿನಂತೆ ಭೂ ಸ್ವಾಧೀನ ಕಾರ್ಯ ನಡೆಯುತ್ತಿದ್ದು, ರೈತರ ಹಿತಚಿಂತನೆಯನ್ನು ಕಾಯಲಾಗುವುದು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡಲ್ಲ. ಮಂಡಳಿಯ ಲಾಭದ ದೃಷ್ಟಿಯಿಂದ ಈ ಯೋಜನೆ ಮಾಡುತ್ತಿಲ್ಲ. ಬದಲಾಗಿ ಮುಂದಿನ ಹಂತದಲ್ಲಿ ಮಧ್ಯಮ ಹಾಗೂ ಕೆಳವರ್ಗದ ಜನರ ನೆತ್ತಿಗೊಂದು ಸೂರನ್ನು ಕೈಗೆಟಕುವ ಬೆಲೆಯಲ್ಲಿ ನೀಡುವ ಉದ್ದೇಶವನ್ನು ಹೊಂದಿದೆ ಎಂದರು.

ಸಮಿತಿ ರಚನೆ: ಈ ಯೋಜನೆಯ ತಡೆರಹಿತ ಪೂರ್ಣ ಅನುಷ್ಠಾನಕ್ಕೆ ಪೂರಕವಾಗಿ ರೈತರಿಂದ ಜಮೀನು ಮಾಹಿತಿ, ದಾಖಲೆಗಳು, ಕಾನೂನು ಬದ್ಧ ಒಡೆತನ ಮಾಹಿತಿ ಪಡೆಯಲು ಇಬ್ಬರು ನೂಡಲ್ ಆಫೀಸರ್, ಇಬ್ಬರು ಉಪವಿಭಾಗಾಧಿಕಾರಿಗಳು, ತಹಸೀಲ್ದಾರರನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನೇಮಕ ಮಾಡಲಿದ್ದು ಈ ಬಗ್ಗೆ ಕಂದಾಯ ಸಚಿವ ಆರ್. ಆಶೋಕ್‍ರವರಲ್ಲಿ ನಿಯೋಗ ತೆರಳಿ ಸಮಿತಿ ರಚನೆಗೆ ಒಪ್ಪಿಗೆ ಪಡೆಯಲಾಗುವುದು. ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ತೀರ್ಮಾನಿಸಲಾಗುವುದು ಎಂದರು.

ವೇದಿಕೆಯಲ್ಲಿ ಸಂಸದ ಡಿ.ಕೆ. ಸುರೇಶ್, ಶಾಸಕರಾದ ಎಂ. ಕೃಷ್ಣಪ್ಪ, ಬಿ. ಶಿವಣ್ಣ ಹಾಗೂ ಕೆಲ ರೈತರು ಮಾತನಾಡಿದರು. ಕೆಹೆಚ್‍ಬಿ ಆಯುಕತಿರಾದ ರಮೇಶ್, ಅಭಿಯಂತರರಾದ ನಂಜುಂಡಪ್ಪನವರು ಹಾಗೂ ಸುರೇಶ್‍ರವರು ಲೋಕೇಶ್ ಬಾಬು, ಕೊಟ್ರೇಶ್, ಬೋಪಣ್ಣ, ನಗರ ಜಿಪಂ ಅಧ್ಯಕ್ಷ ಮರಿಸ್ವಾಮಿ, ಆರ್.ಕೆ. ರಮೇಶ್, ಇಂಡ್ಲವಾಡಿ ನಾಗರಾಜು, ಜಿಪಂ ಸದಸ್ಯ ಅಚ್ಯುತರಾಜು, ಕೃಷ್ಣಂರಾಜು, ಮಂಜುಳಾ ಮಾರೇಗೌಡ ಸಭೆಯಲ್ಲಿ ಪಾಲ್ಗೊಂಡಿದ್ದರು.

Facebook Comments