ವಸತಿ ಯೋಜನೆಗಳ ಸಹಾಯಧನ ಹೆಚ್ಚಳ ಮಾಡಲು ಕೇಂದ್ರಕ್ಕೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.20- ವಸತಿ ಯೋಜನೆಗಳ ಸಹಾಯಧನ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಬೆಂಗಳೂರು ನಗರದ ವಸತಿ ಯೋಜನೆಗಳ ಬಗ್ಗೆ ನಗರದ ಶಾಸಕರು ಮತ್ತು ಸಂಸದರೊಂದಿಗೆ ನಡೆಸಿದ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಮುಂದಿನ ಬಜೆಟ್‍ಗೂ ಮುನ್ನ ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರ ವಸತಿ ಸಚಿವರನ್ನು ಭೇಟಿ ಮಾಡಿ ಸಹಾಯಧನ ಹೆಚ್ಚಿಸುವಂತೆ ಕೋರಲಾಗುವುದು. ಈ ವಿಚಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಮ್ಮತಿಸಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ವಸತಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ವಾರ್ಷಿಕ ಮೂರು ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳು ಈ ಯೋಜನೆಯಡಿ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. ಯಾವ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ವಸತಿ ಯೋಜನೆ ಅನುಷ್ಠಾನವಾಗುತ್ತದೆಯೋ ಆ ಕ್ಷೇತ್ರದವರಿಗೆ ಶೇ.50ರಷ್ಟು ಮನೆಗಳನ್ನು ಮೀಸಲಿರಿಸಲಾಗುತ್ತಿದೆ. ಇನ್ನು ಶೇ.50ರಷ್ಟು ಮನೆಗಳನ್ನು ಬೆಂಗಳೂರಿನ ನಿವಾಸಿಗಳು ಪಡೆಯಬಹುದಾಗಿದೆ ಎಂದು ಹೇಳಿದರು.

ಈ ಯೋಜನೆಯ ಬಗ್ಗೆ ಸಂಪುಟ ಸಭೆಯಲ್ಲೂ ಚರ್ಚೆ ನಡೆಸಲಾಗಿದೆ. ಪ್ರಾಯೋಗಿಕವಾಗಿ, ಪಾರದರ್ಶಕವಾಗಿ ಈ ಯೋಜನೆಯನ್ನು ಪ್ರಾರಂಭಿಸಬೇಕೆಂಬ ಉದ್ದೇಶ ಸರ್ಕಾರ ಹೊಂದಿದೆ ಎಂದು ತಿಳಿಸಿದರು. ಮುಂದಿನ ಮೂರು ವರ್ಷಗಳಲ್ಲಿ ಬೆಂಗಳೂರನ್ನು ಕೊಳಗೇರಿ ಮುಕ್ತ ನಗರವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಅದಕ್ಕೆ ಪೂರಕವಾಗಿ ಈಗಾಗಲೇ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಚರ್ಚೆಯ ಒಂದು ಹಂತದಲ್ಲಿ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ(ಸ್ಲಂ ಬೋರ್ಡ್)ಯನ್ನು ಮುಚ್ಚುವುದೇ ಒಳಿತು ಎಂಬ ಅಭಿಪ್ರಾಯವನ್ನು ಸಚಿವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿಗಳ ವಸತಿ ಯೋಜನೆಯಡಿ ಪ್ರತಿ ಮನೆಯನ್ನು ಎರಡೂವರೆ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಯಾವ ರೀತಿ ಮನೆಗಳನ್ನು ನಿರ್ಮಿಸಬೇಕು, ಫಲಾನುಭವಿಗಳಿಗೆ ಎಷ್ಟು ಸಹಾಯಧನ ನೀಡಬೇಕು ಮತ್ತು ಎಲ್ಲಿ ಮನೆಗಳನ್ನು ನಿರ್ಮಿಸಿದರೆ ಅನುಕೂಲವಾಗಲಿದೆ ಎಂಬ ಬಗ್ಗೆ ಸಲಹೆ, ಸಹಕಾರವನ್ನು ನೀಡುವಂತೆ ಶಾಸಕರು, ಸಂಸದರಲ್ಲಿ ಕೋರಿದರು.

ವಾಸಿಸಲು ಯೋಗ್ಯವಾಗಿರುವ ಸ್ಥಳಗಳಲ್ಲಿ ಮನೆಗಳನ್ನು ನಿರ್ಮಿಸಬೇಕು. ಸ್ಥಳೀಯ ಶಾಸಕರ ವಿಶ್ವಾಸವನ್ನು ತೆಗೆದುಕೊಂಡು ಮನೆ ನಿರ್ಮಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಮನೆಗಳನ್ನು ನಿರ್ಮಿಸಿದರೂ ಜನರೇ ಬಾರದೆ ಯೋಜನೆಯ ಉದ್ದೇಶ ಈಡೇರುವುದಿಲ್ಲ ಎಂದು ಹೇಳಿದ್ದಾರೆ.

ಸಭೆಯಲ್ಲಿ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ಸಂಸದ ಡಿ.ಕೆ.ಸುರೇಶ್, ಶಾಸಕರಾದ ಸೌಮ್ಯರೆಡ್ಡಿ, ಗೋಪಾಲಯ್ಯ, ಸತೀಶ್ ರೆಡ್ಡಿ, ರಿಜ್ವಾನ್ ಹರ್ಷದ್, ಕೃಷ್ಣಪ್ಪ ಸೇರಿದಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇದ್ದರು.

Facebook Comments