ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಯ : ಸೋಮಣ್ಣ ವಿಶ್ವಾಸ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಅ. 21- ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿ ಮಾತನಾಡಿದ ಅವರು, ನ.3 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಅತ್ಯಂತ ಬಹುತದಿಂದ ಜಯಶೀಲರಾಗಿ ಈ ಎರಡೂ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪರ್ವವನ್ನೇ ಸೃಷ್ಠಿಸಲಿದ್ದಾರೆ ಎಂದರು.

ಈ ಉಪಚುನಾವಣೆಯಲ್ಲಿ ಅಭಿವೃದ್ಧಿಯತ್ತ ಜನರ ಒಲವಿದೆ. ಇನ್ನು ಎರಡು ಮುಕ್ಕಾಲು ವರ್ಷ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ನಡೆಸಲಿದ್ದು, ಜನರಿಗೆ ಅಗತ್ಯ ಸವಲತ್ತು, ಸೌಲಭ್ಯಗಳನ್ನು ಪೂರೈಸುವ ಕೆಲಸ ಪ್ರಾಮಾಣಿಕವಾಗಿ ಆಗಲಿದೆ ಎಂದರು.

ಪ್ರಸ್ತುತ ದೇಶದಲ್ಲಿ ಕೊರೊನಾ, ನೆರೆ, ಪ್ರವಾಹದಂತಹ ಸಂದಿಗ್ದ ಪರಿಸ್ಥಿತಿ ಉಂಟಾಗಿದೆ. ಇಂದಿನ ಸಂದಿಗ್ದ ಸಮಸ್ಯೆಗಳಿಗೆ ಮಾರ್ಗೋಪಾಯ ಮತ್ತು ಪರಿಹಾರ ಒದಗಿಸುವ ಕೆಲಸನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ರಾಜ್ಯದಲ್ಲಿ ಕೊರೊನಾವನ್ನು ಬುದ್ಧಿವಂತಿಕೆಯಿಂದ ನಿಭಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಚಿದಾನಂದ್ ಗೆಲುವು: ಹಾಗೆಯೇ ಇದೇ ತಿಂಗಳ 28 ರಂದು ನಡೆಯಲಿರುವ ಕೋಲಾರ, ಚಿಕ್ಕಬಳ್ಳಾರು, ತುಮಕೂರು, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾಗಳನ್ನೊಳಗೊಂಡ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಚಿದಾನಂದ ಗೌಡ ಅವರ ಗೆಲುವು ನಿಶ್ಚಿತ ಎಂದರು. ಉತ್ತರ ಕರ್ನಾಟಕದಲ್ಲಿ ಅನಿರೀಕ್ಷಿತವಾಗಿ ನೆರೆ, ಪ್ರವಾಹ ಉಂಟಾಗಿದೆ. ಈಗಾಗಲೇ ಕಂದಾಯ ಸಚಿವ ಆರ್. ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.

ಹಾಗೆಯೇ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ನೆರೆ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದು, ನೆರೆಯಿಂದ ಕಷ್ಟಕ್ಕೆ ಒಳಗಾಗಿರುವ ಸಂತ್ರಸ್ತರ ನೆರವಿಗೆ ಸರ್ಕಾರ ಸದಾ ಸಿದ್ದವಿದೆ ಎಂದರು.  ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ನಿನ್ನೆಯೇ ಏನು ಹೇಳಬೇಕೋ ಅದನ್ನೆಲ್ಲಾ ಹೇಳಿದ್ದೇವೆ. ಯಡಿಯೂರಪ್ಪನವರು ನಮ್ಮ ಪ್ರಶ್ನಾತೀತ ನಾಯಕರು. ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿಯೇ ಇಲ್ಲ. ಅದು ಭರ್ತಿಯಾಗಿದೆ ಎಂದರು.

ಸಂಸದೆ ಶೋಭಾಕರಂದ್ಲಾಜೆ, ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಎಂ.ಬಿ. ನಂದೀಶ್, ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಚಿದಾನಂದಗೌಡ, ಕೊಪ್ಪಲ್ ನಾಗರಾಜು, ರವಿಶಂಕರ್ ಹೆಬ್ಬಾಕ, ಟಿ.ಆರ್. ಸದಾಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.

Facebook Comments