ಕೊರೊನಾ ವಾರಿಯರ್ಸ್‍ಗಳಿಗಿಲ್ಲ ಸೀರೆ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.9- ಕೊರೊನಾ ವಿರುದ್ಧ ತಮ್ಮ ಪ್ರಾಣದ ಹಂಗನ್ನೇ ತೊರೆದು ಹಗಲಿರುಳು ಹೋರಾಟ ಮಾಡಿದ್ದ ಕೋವಿಡ್ ವಾರಿಯರ್ಸ್‍ಗೆ ಉಡುಗೊರೆ ನೀಡಲು ಸಚಿವ ಶ್ರೀಮಂತ ಪಾಟೀಲ್ ನೀಡಿದ್ದ ಪ್ರಸ್ತಾವನೆಯನ್ನು ರಾಜ್ಯ ಹಣಕಾಸು ಇಲಾಖೆ ತಿರಸ್ಕರಿಸಿದೆ. ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್, ಪೌರ ಕಾರ್ಮಿಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆರು ಹಾಗೂ ಹೋಮ್ ಗಾರ್ಡ್‍ಗಳಿಗೆ ಸೀರೆ ಉಡುಗೊರೆ ನೀಡುವಂತೆ ಸಚಿವರು ಪ್ರಸ್ತಾವನೆ ಸಲ್ಲಿಸಿದ್ದರು.

ಸೀರೆ ಗಿಫ್ಟ್ ನೀಡಿದರೆ ಸಂಕಷ್ಟದಲ್ಲಿರುವ ನೇಯ್ಗೆದಾರರ ಬದುಕಿಗೆ ಸಹಾಯವಾಗಲಿದೆ ಎಂಬ ಹಿನ್ನೆಲೆಯಲ್ಲಿ ಶ್ರೀಮಂತ ಪಾಟೀಲ್ ಅವರು ಪ್ರಸ್ತಾವನೆ ಮುಂದಿಟ್ಟಿದ್ದರು. ಕೊರೋನಾ ವಾರಿಯರ್ಸ್ ಗೆ ಸೀರೆ ಉಡುಗೊರೆ ನೀಡಲು 36 ಕೋಟಿ ರೂ. ಖರ್ಚಾಗುತ್ತದೆ. ಸದ್ಯ ಹಣಕಾಸಿನ ಸಮಸ್ಯೆಯಿರುವ ಕಾರಣ, ಈ ಪ್ರಸ್ತಾವನೆ ಅಂಗೀಕರಿಸಲು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ತಿಳಿಸಿದೆ.

ಕರ್ನಾಟಕವು ಸುಮಾರು 54,000 ಕೈಮಗ್ಗ ಮತ್ತು 1.4 ಲಕ್ಷ ಪವರ್‍ಲೂಮ್ ನೇಕಾರರನ್ನು ಹೊಂದಿದ್ದು, ಹೆಚ್ಚಾಗಿ ಬೆಳಗಾವಿ, ಬಾಗಲಕೋಟೆ, ಚಿತ್ರದುರ್ಗ, ವಿಜಯಪುರ, ಬೆಂಗಳೂರು ಗ್ರಾಮೀಣ ಮತ್ತು ರಾಮನಗರಂ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿದೆ.  ಕಳೆದ ವರ್ಷ ದಸರಾ ಅಥವಾ ದೀಪಾವಳಿ ಸಂದರ್ಭದಲ್ಲಿ ಕೋವಿಡ್ ಯೋಧರಿಗೆ ಸೀರೆಗಳನ್ನು ಉಡುಗೊರೆಯಾಗಿ ನೀಡುವುದು ಸಚಿವ ಪಾಟೀಲ್ ಅವರ ಯೋಜನೆಯಾಗಿತ್ತು.

ಜವಳಿ ಇಲಾಖೆಯಿಂದ ಹಿರಿಯ ಅಧಿಕಾರಿಯೊಬ್ಬರು ನೇಕಾರರಿಂದ 6 ಲಕ್ಷ ಸೀರೆಗಳನ್ನು ಖರೀದಿಸಲು ಬಯಸಿದ್ದು, ಪ್ರತಿ ಸೀರೆಗೆ 500 ರೂ.ನಿಂದ 600 ರೂ. ಕೊಟ್ಟು ಖರೀದಿಸಿ 3 ಲಕ್ಷ ಕೋವಿಡ್ ಯೋಧರಿಗೆ ತಲಾ ಎರಡು ಉಡುಗೊರೆಗಳನ್ನು ನೀಡಲು ಯೋಜಿಸಲಾಗಿತ್ತು. 36 ಕೋಟಿ ರೂ. ವೆಚ್ಚದ ಅಂದಾಜನ್ನು ಹಣಕಾಸು ಇಲಾಖೆಗೆ ಅನುಮೋದನೆಗಾಗಿ ಕಳುಹಿಸಲಾಗಿತ್ತು. ಆದರೆ ಇಲಾಖೆ ಈ ಪ್ರಸ್ತಾಪವನ್ನು ತಿರಸ್ಕರಿಸಿತು. ಹಣಕಾಸು ಇಲಾಖೆಯು ಸಚಿವರ ಕಡತವನ್ನು ತಿರಸ್ಕರಿಸಿದ ನಂತರ, ಮತ್ತೆ ಅದನ್ನು ಕಳುಹಿಸಿದ್ದಾರೆ ಎಂದು ಸಚಿವರ ಕಚೇರಿಯ ಮೂಲಗಳು ತಿಳಿಸಿವೆ.

ಈ ಬಾರಿ ಸಚಿವರು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದಾರೆ. ಪ್ರಸ್ತುತ, ಸೀರೆ ಖರೀದಿಗೆ 36 ಕೋಟಿ ರೂ. ಖರ್ಚು ಮಾಡುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ. ಇದು ಒಂದು ದೊಡ್ಡ ಮೊತ್ತದ ಹಣ. ಹಾಗಾಗಿ ಉಡುಗೊರೆ ಕೊಡುವುದು ಸೂಕ್ತವಲ್ಲ. ಇಲಾಖೆಯು ನಮ್ಮ ಕಡತವನ್ನು ತಿರಸ್ಕರಿಸುವ ಸಾಧ್ಯತೆಯಿದೆ ಎಂದು ಜವಳಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Facebook Comments